

ಮಂಗಳೂರು: ತೊಕ್ಕೋಟು ಓವರ್ ಬ್ರಿಡ್ಜ್ ಮೇಲೆ ನಡೆದ ಅರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಮಹತ್ವದ ಪ್ರಗತಿ ಸಾಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೆಲ ತಿಂಗಳುಗಳ ಹಿಂದೆ ಉಪ್ಪಳದಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ ಬಜಾಲ್‌ನ ನೌಫಲ್ ಎಂಬಾತನ ಸಾವನ್ನು ಅರಿಫ್ ಸಂಭ್ರಮಿಸಿದ್ದೇ ಈ ಭೀಕರ ಕೊಲೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಈ ಸೇಡಿನ ಕೃತ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ಮತ್ತು ಹಣಕಾಸಿನ ನೆರವು ದೊರೆತಿರುವುದು ಪೊಲೀಸರ ವಿಚಾರಣೆಯಿಂದ ದೃಢಪಟ್ಟಿದೆ.
ಕೃತ್ಯ ನಡೆದ ದಿನದಂದು ರಿಫಾತ್, ಜುತ್ತು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ ಮತ್ತು ರಿಝ್ವಾನ್ ಎಂಬ ಆರು ಮಂದಿ ಆರೋಪಿಗಳು ಇನ್ನೋವಾ ಕಾರಿನಲ್ಲಿ ಅರಿಫ್ ಅವರ ಬೈಕನ್ನು ಹಿಂಬಾಲಿಸಿದ್ದರು. ಜನರಿಲ್ಲದ ನಿರ್ಜನ ಪ್ರದೇಶದಲ್ಲಿ ಅರಿಫ್ ಸಂಚರಿಸುತ್ತಿದ್ದ ಬೈಕ್‌ಗೆ ಕಾರಿನಿಂದ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದ ಹಂತಕರು, ಅರಿಫ್ ಕೆಳಗೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದರು. ಈ ನೇರ ದಾಳಿಯಲ್ಲಿ ಪಾಲ್ಗೊಂಡಿದ್ದ ಆರು ಮಂದಿ ಹಾಗೂ ಅವರಿಗೆ ವಸತಿ ಸೌಕರ್ಯ ಒದಗಿಸಿ ಸ್ಥಳಕ್ಕೆ ತಲುಪಿಸಲು ನೆರವಾಗಿದ್ದ ಇರ್ಷಾದ್ ಎಂಬಾತನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕೊಲೆ ಕೃತ್ಯವು ಅತ್ಯಂತ ವ್ಯವಸ್ಥಿತವಾದ ಸಂಚಿನ ಭಾಗವಾಗಿದ್ದು, ವಿದೇಶದಲ್ಲಿ ಕುಳಿತಿರುವ ಸಹಚರರು ಇದಕ್ಕೆ ಬೆನ್ನೆಲುಬಾಗಿ ನಿಂತಿರುವುದು ಕಂಡುಬಂದಿದೆ. ಸುಹೇಲ್ ಎಂಬಾತ ಕೃತ್ಯಕ್ಕೆ ಬೇಕಾದ ಬಾಡಿಗೆ ಕಾರನ್ನು ವ್ಯವಸ್ಥೆ ಮಾಡಿ ರಿಫಾತ್‌ಗೆ ಹಸ್ತಾಂತರಿಸಿದ ತಕ್ಷಣವೇ ಸೌದಿ ಅರೇಬಿಯಾಕ್ಕೆ ಪರಾರಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ಅರ್ಶದ್ ಎಂಬಾತ ಮಾರಕಾಸ್ತ್ರಗಳನ್ನು ಪೂರೈಸಿದ್ದಲ್ಲದೆ, ಪೊಲೀಸರ ಚಲನವಲನದ ಬಗ್ಗೆ ಹಂತಕರಿಗೆ ಕ್ಷಣ ಕ್ಷಣದ ಮಾಹಿತಿ ನೀಡುತ್ತಿದ್ದನು. ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಈತನೇ ಅವರಿಗೆ ಹಣಕಾಸು ಮತ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದ್ದನು.

ತನಿಖೆಯನ್ನು ಹಾದಿತಪ್ಪಿಸಲು ಆರೋಪಿಗಳು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಹಳೆಯ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಅಶ್ವೀರ್ ಎಂಬಾತ ದುಬೈ ಮೂಲದ ಫೋನ್ ಸಂಖ್ಯೆಗಳ ಮೂಲಕ ಅಂತರಾಷ್ಟ್ರೀಯ ವಾಟ್ಸಾಪ್ ಖಾತೆಗಳನ್ನು ಸಕ್ರಿಯಗೊಳಿಸಿ ನೀಡಿದ್ದನು. ಇದರಿಂದಾಗಿ ಆರೋಪಿಗಳ ಸಂವಹನವನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು. ವಿದೇಶದಲ್ಲಿರುವ ಮುಸ್ತಫಾ ಮತ್ತು ಅಶ್ವೀರ್ ಈ ತಂಡಕ್ಕೆ ಅಗತ್ಯವಿರುವ ಎಲ್ಲಾ ಲಾಜಿಸ್ಟಿಕ್ ಹಾಗೂ ಹಣಕಾಸಿನ ನೆರವು ಒದಗಿಸುತ್ತಿದ್ದರು ಎಂಬ ಬಲವಾದ ಸಾಕ್ಷ್ಯಗಳು ಸಿಕ್ಕಿವೆ. ಪ್ರಸ್ತುತ ಏಳು ಮಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಸಂಚಿನಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.






