

ಕೊಳ್ನಾಡು: ಇತಿಹಾಸ ಪ್ರಸಿದ್ದ ಮುಸ್ಲಿಂ ದಾರ್ಮಿಕ ಕೇಂದ್ರವಾದ ಕಟ್ಟತ್ತಿಲ ದರ್ಗಾ ಹಾಗೂ ಹಿಂದೂ ದಾರ್ಮಿಕ ಕೇಂದ್ರ ಕಟ್ಟತ್ತಿಲ ಮಠವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಡಾಮರೀಕರಣ ಕಾರ್ಯ ಪೂರ್ಣಗೊಂಡಿದ್ದು, ವಿಶೇಷವಾಗಿ ಕಟ್ಟತ್ತಿಲ ಊರೂಸು ಸಮಾರಂಭದ ಸಂಧರ್ಭದಲ್ಲಿ ನಾಗರಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಎರಡು ಸಮುದಾಯಗಳ ಸೌಹಾರ್ದತೆಯ ಸಂಕೇತವಾಗಿ ಗುರುತಿಸಿಕೊಂಡಿರುವ ಈ ರಸ್ತೆ ಇದೀಗ ಸುಧಾರಿತ ರೂಪ ಪಡೆದುಕೊಂಡಿರುವುದು ಸ್ಥಳೀಯರಿಗೆ ಸಂತೋಷ ತಂದಿದೆ.
ಈ ರಸ್ತೆಯ ಇತಿಹಾಸವನ್ನು ನೆನಪಿಸಿಕೊಂಡರೆ, ಹಲವಾರು ವರ್ಷಗಳ ಹಿಂದೆ ಕೊಳ್ನಾಡು ಗ್ರಾಮ ಪಂಚಾಯತ್‌ನ ಸುದೀರ್ಘ ಅವಧಿಯ ಅದ್ಯಕ್ಷರಾಗಿದ್ದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ಮಹತ್ವದ ಪಾತ್ರ ವಹಿಸಿದ್ದರು. ದಾರ್ಮಿಕ ಕೇಂದ್ರಗಳಿಗೆ ಸರಿಯಾದ ರಾಜಮಾರ್ಗವೇ ಇಲ್ಲದ ಸಮಯದಲ್ಲಿ, ಸ್ಥಳೀಯ ಖಾಸಗಿ ಜಮೀನಿನ ಮಾಲೀಕರನ್ನು ಮನವೊಲಿಸಿ, ಎರಡು ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಕಾಪಾಡಿಕೊಂಡು ಕಚ್ಚಾ ರಸ್ತೆ ನಿರ್ಮಾಣ ಮಾಡಲು ಅವರು ಮುಂಚೂಣಿಯಲ್ಲಿ ನಿಂತು ಪ್ರಮುಖ ಪಾತ್ರ ವಹಿಸಿದ್ದರು. ಆ ಕಾಲದಲ್ಲಿ ಹಲವಾರು ನೂತನ ಕಚ್ಚಾ ರಸ್ತೆ ನಿರ್ಮಾಣ ಮಾಡುವಲ್ಲಿ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಬದ್ಧತೆ ಇಂದಿಗೂ ಜನಮನದಲ್ಲಿ ನೆನಪಾಗಿ ಉಳಿದಿದೆ.ಅದರಲ್ಲಿ ಕಟ್ಟತ್ತಿಲ ರಸ್ತೆ ಕೂಡ ಒಂದು.


ಆನಂತರ ಜಿ.ಪಂ. ಸದಸ್ಯರಾಗಿದ್ದ ಎಂ.ಎಸ್. ಮಹಮ್ಮದ್ ಅವರು ಈ ರಸ್ತೆಯ ಅಭಿವೃದ್ಧಿಗೆ ಡಾಮರೀಕರಣ ಅನುದಾನ ಒದಗಿಸಿ ಎರಡನೇ ಹಂತದ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಇದಕ್ಕೆ ಮುಂದುವರಿದಂತೆ, ಸುಭಾಶ್ಚಂದ್ರ ಶೆಟ್ಟಿಯವರ ಅವಧಿಯಲ್ಲಿ ಉಳಿದ ಭಾಗಕ್ಕೆ ಕಾಂಕ್ರೀಟಿಕರಣ ಕಾರ್ಯ ಕೈಗೊಳ್ಳಲಾಗಿದ್ದು, ನಂತರ ನಿಕಟಪೂರ್ವ ಅದ್ಯಕ್ಷರಾದ ಅಶ್ರಫ್ ಸಾಲೆತ್ತೂರು ಅವರ ಅವಧಿಯಲ್ಲಿ ಈ ಭಾಗದ ರಸ್ತೆ ಅಭಿವೃದ್ಧಿ ಇನ್ನಷ್ಟು ಬಲಪಡಿಸಲಾಯಿತು.
ಇದೀಗ, ರಸ್ತೆ ಉದ್ದವಾದ ಸಂಪರ್ಕ ಮಾರ್ಗವಾಗಿರುವ ಹಿನ್ನೆಲೆ,ನಾಗರೀಕರ ಬೇಡಿಕೆಗೆ ಸಾಲೆತ್ತೂರು ಗ್ರಾ.ಪಂಚಾಯತ್ ಮಾಜಿ ಅದ್ಯಕ್ಷರಾದ ಹಸೈನಾರ್ ಡಿ.ಕೆ.ಹಾಗೂ ಕೊಳ್ನಾಡು ಅದ್ಯಕ್ಷರಾಗಿದ್ದ ಅಶ್ರಪ್ ಸಾಲೆತ್ತೂರು ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿ ಶ್ರಿ ಸುಭಾಶ್ಚಂದ್ರ ಶೆಟ್ಟಿಯವರು ವಿಧಾನಪರಿಷತ್ ಶಾಸಕರಾದ ಡಾ. ಮಂಜುನಾಥ ಭಂಡಾರಿಯವರ ಮೂಲಕ ಅವರ ಅನುದಾನದಲ್ಲಿ ಸಂಪೂರ್ಣ ಡಾಮರೀಕರಣ ಕಾರ್ಯ ನೆರವೇರಿಸಲಾಗಿದೆ. ಜೊತೆಗೆ ಹೈಮಾಸ್ಕ್ ದೀಪ ಅಳವಡಿಕೆಯಿಂದ ರಾತ್ರಿ ವೇಳೆ ಸಂಚಾರಕ್ಕೂ ಅನುಕೂಲ ಕಲ್ಪಿಸಲಾಗಿದೆ. ಈ ಕಾರ್ಯಗಳು ವಿಶೇಷವಾಗಿ ಊರೂಸು ಸಂದರ್ಭದಲ್ಲಿ ಭಾಗದ ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ಈ ಹಿಂದೆ ಮಸೀದಿ ಬಳಿ ಮಾಜಿ ಸಚಿವರಾದ ಬಿ. ರಮನಾಥ ರೈ ಅವರ ಅವಧಿಯಲ್ಲಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ಕೂಡ ಈ ಸಂಧರ್ಭದಲ್ಲಿ ದುರಸ್ತಿ ಮಾಡಲಾಗಿದ್ದು, ಸಾರ್ವಜನಿಕ ಬಳಕೆಗೆ ಮತ್ತಷ್ಟು ಅನುಕೂಲವಾಗಿದೆ. ಒಟ್ಟಿನಲ್ಲಿ, ಕಟ್ಟತ್ತಿಲ ದರ್ಗಾ–ಮಠ ಸಂಪರ್ಕ ರಸ್ತೆ ಇಂದು ಸೌಹಾರ್ದದ ಪ್ರತೀಕವಾಗಿ ಹೊರಹೊಮ್ಮಿದ್ದು, ಇದರ ಹಿಂದೆ ಕಾರ್ಯನಿರ್ವಹಿಸಿದ ಎಲ್ಲರ ಸೇವೆಯನ್ನು ಸ್ಥಳೀಯರು,ಮಸೀದಿ-ಮಂದಿರದ ಆಡಳಿತ ಮಂಡಳಿಯವರು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ.






