

ಕಾರ್ಕಳ : ಕುಕ್ಕುಂದೂರು ಗ್ರಾಮದ ನಕ್ರೆ ಜಡ್ಡು ಮನೆ ನಿವಾಸಿಯಾದ ಉಮೇಶ ಕೋಟ್ಯಾನ್ ಅವರು ವಿಷ ಪದಾರ್ಥ ಸೇವಿಸಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.
ಮೃತ ಉಮೇಶ ಕೋಟ್ಯಾನ್ ಅವರು ಈ ಹಿಂದೆ ಮುಂಬೈನಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದು, ವ್ಯವಹಾರದಲ್ಲಿ ನಷ್ಟ ಉಂಟಾಗಿ ಸುಮಾರು 5-6 ತಿಂಗಳ ಹಿಂದೆ ಊರಿಗೆ ಮರಳಿದ್ದರು. ಬಳಿಕ ಅವರು ಅತಿಯಾಗಿ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಕರುಳಿನ ಸಮಸ್ಯೆ ಹಾಗೂ ಬಿಳಿ ಕಾಮಾಲೆ ರೋಗದಿಂದ ಬಳಲುತ್ತಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರದೆ ಇದ್ದ ಕಾರಣ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ಏಪ್ರಿಲ್ 04 ರಂದು ಅವರು ವಿಷ ಪದಾರ್ಥ ಸೇವಿಸಿಕೊಂಡಿದ್ದು, ತಕ್ಷಣ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ದಿನಾಂಕ 08-04-2026 ರಂದು ಸಂಜೆ 7:07 ಗಂಟೆಗೆ ಅವರು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






