

ಹಾಸನ: “ಪ್ರೀತಿ ಕುರುಡು” ಎಂಬ ಮಾತಿದೆ. ಆದರೆ ಹಾಸನದಲ್ಲಿ ನಡೆದ ಈ ಘಟನೆ ನೋಡಿದರೆ, ಆ ಕುರುಡು ಪ್ರೀತಿ ಮನುಷ್ಯನ ಸಂಬಂಧಗಳ ಮೌಲ್ಯವನ್ನೇ ಹೇಗೆ ಹೊಸಕಿ ಹಾಕುತ್ತದೆ ಎಂಬುದು ಸಾಬೀತಾಗಿದೆ. ಮದುವೆಯಾಗಿ ಎಂಟು ವರ್ಷಗಳ ಸುದೀರ್ಘ ಸಂಸಾರ, ಕಣ್ಣೆದುರೇ ಆಟವಾಡುವ ಏಳು ವರ್ಷದ ಮಗ, ಪ್ರೀತಿಯಿಂದ ಸಾಕಿ ಸಲಹಿದ ಪೋಷಕರು… ಇವೆಲ್ಲವನ್ನೂ ಕೇವಲ ಕ್ಷಣಿಕ ಸುಖಕ್ಕಾಗಿ ಗಾಳಿಗೆ ತೂರಿದ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಕಾರಿನಲ್ಲೇ ಮದುವೆಯಾಗಿರುವ ವಿಚಿತ್ರ ಘಟನೆ ಈಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಂಬಂಧಿಕರ ನಡುವೆಯೇ ನಡೆದಿದ್ದ ಸುಂದರ ಸಂಸಾರ
ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾ ಎಂಬಾಕೆಗೆ 2017ರಲ್ಲಿ ಹಾಸನ ತಾಲೂಕಿನ ಮುಕಂದೂರು ಗ್ರಾಮದ ಪ್ರಕಾಶ್ ಎಂಬುವವರ ಜೊತೆ ವಿವಾಹವಾಗಿತ್ತು. ಪ್ರಕಾಶ್ ಬೇರಾರೂ ಅಲ್ಲ, ಹರ್ಷಿತಾಳ ಸ್ವಂತ ಅತ್ತೆಯ ಮಗ. ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಈ ಮದುವೆಯಲ್ಲಿ ದಂಪತಿಗೆ ಏಳು ವರ್ಷದ ಮುದ್ದಾದ ಗಂಡು ಮಗನಿದ್ದಾನೆ. ಎಂಟು ವರ್ಷಗಳ ಕಾಲ ಈ ಸಂಸಾರ ಸುಗಮವಾಗಿಯೇ ಸಾಗಿತ್ತು. ಆದರೆ ಹರ್ಷಿತಾ ಮನಸ್ಸಿನಲ್ಲಿ ಪ್ರೀತಿಯ ಹೆಸರಿನಲ್ಲಿ ಬೇರೆಯದೇ ಹಠವೊಂದು ಹೆಡೆ ಎತ್ತಿತ್ತು.

ಆಸ್ಪತ್ರೆಯ ನೆಪ.. ನಾಪತ್ತೆಯಾದ ಪತ್ನಿ!
ಕಳೆದ ಮಾರ್ಚ್ 30ರಂದು “ಆಸ್ಪತ್ರೆಗೆ ಹೋಗಿ ಬರುತ್ತೇನೆ” ಎಂದು ಮನೆಯಿಂದ ಹೊರಬಿದ್ದ ಹರ್ಷಿತಾ ಮತ್ತೆ ಮನೆಗೆ ಮರಳಲೇ ಇಲ್ಲ. ಪತ್ನಿ ಕಾಣದಿದ್ದಾಗ ಆತಂಕಗೊಂಡ ಪತಿ ಪ್ರಕಾಶ್ ಹಾಗೂ ಮಗಳು ಕಾಣೆಯಾಗಿದ್ದಾಳೆ ಎಂದು ಹರ್ಷಿತಾ ಪೋಷಕರು ಗಾಬರಿಯಿಂದ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ತನಿಖೆ ನಡೆಸಿ ಹರ್ಷಿತಾಳನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ.
ಪೊಲೀಸರ ಮುಂದೆಯೇ ಹಠ: ಸಾಂತ್ವನ ಕೇಂದ್ರದಲ್ಲೂ ನಾಟಕ!
ಠಾಣೆಯಲ್ಲಿ ಪತಿ ಪ್ರಕಾಶ್ ಎಷ್ಟೇ ಅಂಗಲಾಚಿದರೂ, ಪೋಷಕರು ಬುದ್ಧಿವಾದ ಹೇಳಿದರೂ ಹರ್ಷಿತಾ ಮಾತ್ರ ಕರಗಲಿಲ್ಲ. “ನನಗೆ ಪತಿ, ಮಗ ಯಾರೂ ಬೇಡ, ನಾನು ನನ್ನ ಪ್ರಿಯಕರ ಸಚಿನ್ ಜೊತೆಗೇ ಹೋಗುತ್ತೇನೆ” ಎಂದು ಹಠ ಹಿಡಿದಿದ್ದಳು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.
ಆದರೆ, ಅಲ್ಲಿಯೂ ತನ್ನ ಹಠ ಸಾಧಿಸಲು ಹರ್ಷಿತಾ ಸ್ಕೆಚ್ ಹಾಕಿದ್ದಳು. ತನಗೆ ಆರೋಗ್ಯ ಸರಿಯಿಲ್ಲ ಎಂದು ಸಾಂತ್ವನ ಕೇಂದ್ರದ ಸಿಬ್ಬಂದಿ ನಂಬಿಸಿ, ಆಸ್ಪತ್ರೆಗೆ ಹೋಗುವ ನೆಪದಲ್ಲಿ ಅಲ್ಲಿಂದ ಹೊರಬಂದಿದ್ದಾಳೆ. ಕಾಯುತ್ತಿದ್ದ ಪ್ರಿಯಕರ ಸಚಿನ್ ಜೊತೆ ಕಾರು ಹತ್ತಿದ್ದೂ ಅಲ್ಲದೆ, ಚಲಿಸುತ್ತಿದ್ದ ಕಾರಿನಲ್ಲಿಯೇ ಮಾಲೆ ಬದಲಿಸಿಕೊಂಡು ವಿವಾಹವಾಗುವ ಮೂಲಕ ತನ್ನ ಹುಚ್ಚಾಟ ಮೆರೆದಿದ್ದಾಳೆ.
ಮಗನ ಭವಿಷ್ಯದ ಬಗ್ಗೆ ಕಾಳಜಿಯಿಲ್ಲದ ತಾಯಿ!
ಹೆತ್ತ ಮಗನ ಮುಖವನ್ನೂ ನೋಡದೆ, ಎಂಟು ವರ್ಷಗಳ ದಾಂಪತ್ಯಕ್ಕೆ ಎಳ್ಳುನೀರು ಬಿಟ್ಟ ಹರ್ಷಿತಾಳ ಈ ನಡೆಯಿಂದ ಪೋಷಕರು ಹಾಗೂ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಗನ ಭವಿಷ್ಯದ ಬಗ್ಗೆಯೂ ಯೋಚಿಸದ ಇವಳದ್ದು ಎಂತ ಪ್ರೀತಿ?” ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ, ಕ್ಷಣಿಕ ಆಕರ್ಷಣೆಗೆ ಬಲಿಯಾಗಿ ಸುಂದರ ಕುಟುಂಬವನ್ನು ಬೀದಿಗೆ ತಂದ ಈ ಘಟನೆ, ಸಮಾಜದಲ್ಲಿ ನೈತಿಕ ಸಂಬಂಧಗಳು ಎತ್ತ ಸಾಗುತ್ತಿವೆ ಎಂಬ ಆತಂಕಕಾರಿ ಪ್ರಶ್ನೆಯನ್ನು ಹುಟ್ಟುಹಾಕಿದೆ.






