

ಮೀಡಿಯಾ ಒನ್ ಕನ್ನಡ ಸಂಪಾದಕ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ರೀತಿಯ ಆರ್ಥಿಕ ವಂಚನೆ ಶುರುವಾಗಿದೆ. ಕೆಲವು ಏಜೆಂಟ್‌ಗಳು ಮತ್ತು ಬ್ರೋಕರ್‌ಗಳು ಸುಲಭವಾಗಿ ಲೋನ್ ಕೊಡಿಸುತ್ತೇವೆ ಎಂದು ನಂಬಿಸಿ, ಫ್ರಿಜ್, ವಾಷಿಂಗ್ ಮಷೀನ್, ಮೊಬೈಲ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಎಂಐ ಮೂಲಕ ಕೊಡಿಸುವುದಾಗಿ ಆಮಿಷವೊಡ್ಡುತ್ತಿದ್ದಾರೆ.

ವಂಚನೆಯ ವಿಧಾನ ಹೀಗೆ:
ಏಜೆಂಟ್‌ಗಳು ಮೊದಲು ನಿಮ್ಮ ಬಳಿ ಬಂದು, ನಿಮ್ಮ ಹೆಸರಿನಲ್ಲಿ ಲೋನ್ ಮಾಡಿಕೊಡುತ್ತೇವೆ ಎಂದು ಹೇಳುತ್ತಾರೆ. ಎಲ್ಲಾ ದಾಖಲೆಗಳನ್ನು ಪಡೆದ ನಂತರ ಕೊನೆಯ ಹಂತವಾಗಿ ಒಟಿಪಿ, OTP ಕೇಳುತ್ತಾರೆ. ಒಟಿಪಿ ನೀಡಿದ ತಕ್ಷಣ ನಿಮ್ಮ ಹೆಸರಿನಲ್ಲಿ ಲೋನ್ ಅಪ್ರೂವ್ ಆಗುತ್ತದೆ. ಆದರೆ ನಿಮಗೆ ಮೊಬೈಲ್, ಫ್ರಿಜ್ ಯಾವುದೂ ಸಿಗುವುದಿಲ್ಲ. ಹಣವೂ ಕೈಗೆ ಬರುವುದಿಲ್ಲ. ಒಂದು ತಿಂಗಳ ನಂತರ ನಿಮಗೆ ಫೋನ್ ಕರೆ ಅಥವಾ ಮೆಸೇಜ್ ಬರುತ್ತದೆ, ನಿಮ್ಮ ಹೆಸರಿನಲ್ಲಿ ಲೋನ್ ಬಾಕಿ ಇದೆ, ಕಟ್ಟಬೇಕು ಎಂದು.
ಆ ಹೊತ್ತಿಗೆ ನೀವು ಮಾಡಲು ಏನೂ ಇರುವುದಿಲ್ಲ. ಏಕೆಂದರೆ ಅರ್ಜಿ ಸಲ್ಲಿಸುವಾಗಲೇ ನಿಮ್ಮ ಎಲ್ಲಾ ದಾಖಲೆಗಳನ್ನು ನೀವು ಅವರಿಗೆ ಕೊಟ್ಟಿರುತ್ತೀರಿ.
ಸಾರ್ವಜನಿಕರಿಗೆ ಮನವಿ:
- ಯಾರೇ ಬಂದು ಸುಲಭ ಲೋನ್, ಇಎಂಐ ಮೇಲೆ ವಸ್ತು ಕೊಡಿಸುವುದಾಗಿ ಹೇಳಿದರೂ ನಂಬಬೇಡಿ.
- ಯಾವುದೇ ಕಾರಣಕ್ಕೂ ಒಟಿಪಿ, OTP ಬೇರೆಯವರಿಗೆ ಶೇರ್ ಮಾಡಬೇಡಿ. ಒಟಿಪಿ ಎಂದರೆ ನಿಮ್ಮ ಸಹಿ ಇದ್ದಂತೆ.
- ಲೋನ್ ಅಥವಾ ಇಎಂಐ ಬೇಕಾದರೆ ನೇರವಾಗಿ ಬ್ಯಾಂಕ್, ಮಾನ್ಯತೆ ಪಡೆದ ಫೈನಾನ್ಸ್ ಕಂಪನಿ ಅಥವಾ ಅಧಿಕೃತ ಶೋ ರೂಂ ಮೂಲಕವೇ ಮಾಡಿ.
- ಅತಿಯಾದ ಆಮಿಷಕ್ಕೆ ಬೇಗ ಮರುಳಾಗಬೇಡಿ. ಸತ್ಯವನ್ನು ನಂಬಲು ನಾವು ತಡ ಮಾಡುತ್ತೇವೆ, ಸುಳ್ಳನ್ನು ತಕ್ಷಣ ನಂಬುತ್ತೇವೆ. ಇದು ಆಮೇಲೆ ವಿಷಾದಕ್ಕೆ ಕಾರಣವಾಗುತ್ತದೆ.
ವಂಚನೆ ಆದ ನಂತರ ಪೊಲೀಸ್ ಠಾಣೆಗೆ ದೂರು ಕೊಟ್ಟರೂ, ಲೋನ್ ನಿಮ್ಮ ಹೆಸರಿನಲ್ಲಿ ಆಗಿರುವುದರಿಂದ ಹಣ ಕಟ್ಟುವ ಜವಾಬ್ದಾರಿ ನಿಮ್ಮದೇ ಆಗುತ್ತದೆ. ಆದ್ದರಿಂದ ಮುಂಜಾಗ್ರತೆ ತುಂಬಾ ಮುಖ್ಯ.
ಮಂಗಳೂರು ಮತ್ತು ದಕ್ಷಿಣ ಕನ್ನಡದ ಜನರು ಈ ಹೊಸ ಟ್ರೆಂಡ್ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಜಾಗ್ರತೆಯೇ ನಿಮ್ಮ ರಕ್ಷಣೆ.






