

ಮಂಗಳೂರು: ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಹಳೆಯಂಗಡಿಯ ಇಂದಿರಾ ನಗರ ರೈಲ್ವೇ ಗೇಟ್ ಸಮೀಪ ಶುಕ್ರವಾರ ಸಂಭವಿಸಿದೆ.
ಗಾಯಗೊಂಡವರನ್ನು ಇಂದಿರಾ ನಗರದ ನಿವಾಸಿಗಳಾದ ಪ್ರತಿಭಾ ಮತ್ತು ವಾಣಿ ಎಂದು ಗುರುತಿಸಲಾಗಿದೆ. ಗಾಯಾಳುಗಳ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ.ಅತ್ತಿಗೆ-ನಾದಿನಿಯಾದ ಇವರಿಬ್ಬರೂ ಸ್ಕೂಟರ್‌ನಲ್ಲಿ ಮುಕ್ಕಾದಲ್ಲಿರುವ ತಮ್ಮ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದರು. ಇಂದಿರಾ ನಗರ ರೈಲ್ವೇ ಗೇಟ್ ಪಕ್ಕದ ಕಿರಿದಾದ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಅತಿ ವೇಗವಾಗಿ ಬಂದ ಟಿಪ್ಪರ್ ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಅಪಘಾತದ ತೀವ್ರತೆಗೆ ಪ್ರತಿಭಾ ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದು, ವಾಣಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಮುಕ್ಕಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.







