May 21, 2026
WhatsApp Image 2026-05-21 at 9.52.13 AM

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಪರಪ್ಪು ನಿವಾಸಿ, ಬೀದಿ ಬದಿ ತರಕಾರಿ ವ್ಯಾಪಾರಿ ಮೊಹಮ್ಮದ್ ಶರೀಫ್ (35) ಅವರು ಹೊಟ್ಟೆ ನೋವಿನ ಕಾರಣ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಕುಟುಂಬದ ಆರೋಪವೇನು?
ಕುಟುಂಬದವರು ನೀಡಿರುವ ಮಾಹಿತಿಯ ಪ್ರಕಾರ, ಶರೀಫ್ ಅವರು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಸೂರ್ಯ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಅಡ್ಮಿಟ್ ಆದ ಬಳಿಕ ನಡೆಸಿದ ಚಿಕಿತ್ಸೆ ವೇಳೆ ದೊಡ್ಡ ಕರುಳಿಗೆ ತೂತಾಗಿ, ಮಲವು ಹೊಟ್ಟೆಯೊಳಗೆ ಸೇರಿಕೊಂಡು ಸ್ಥಿತಿ ಗಂಭೀರವಾಯಿತು ಎಂದು ಆರೋಪಿಸಿದ್ದಾರೆ. ತಕ್ಷಣ ಸೂರ್ಯ ಆಸ್ಪತ್ರೆಯವರೇ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅಲ್ಲಿ ಶಸ್ತ್ರಚಿಕಿತ್ಸೆ ನಡೆದರೂ ಸೋಂಕು ಉಲ್ಬಣಗೊಂಡು ಇಂದು ಬೆಳಗ್ಗೆ ಅವರು ಮೃತಪಟ್ಟಿದ್ದಾರೆ.

ಪೊಲೀಸ್ ದೂರು ದಾಖಲು
ಈ ಘಟನೆಗೆ ಸಂಬಂಧಿಸಿ ವೈದ್ಯಕೀಯ ನಿರ್ಲಕ್ಷ್ಯ ಆರೋಪಿಸಿ ಮೃತರ ಕುಟುಂಬಸ್ಥರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೂವರು ಮಕ್ಕಳ ತಂದೆ
ಮೃತ ಶರೀಫ್ ಅವರಿಗೆ 10 ವರ್ಷದೊಳಗಿನ ಮೂವರು ಚಿಕ್ಕ ಮಕ್ಕಳಿದ್ದು, ಕುಟುಂಬದ ಆಧಾರಸ್ತಂಭ ಕಳೆದುಕೊಂಡು ಕಂಗಾಲಾಗಿದೆ.

ಸಾರ್ವಜನಿಕರ ಆಕ್ರೋಶ
ಈ ಘಟನೆಯ ನಂತರ ಸೂರ್ಯ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಿಷ್ಪಕ್ಷಪಾತ ತನಿಖೆಗೆ ರಿಯಾಝ್ ಹರೇಕಳ ಆಗ್ರಹಿಸಿದ್ದಾರೆ

ಈ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಅವರು, ಬೀದಿ ಬದಿ ವ್ಯಾಪಾರಿ ಶರೀಫ್ ಅವರ ಸಾವಿನ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಇನ್ನೊಂದು ಹಂತದ ಅನ್ಯಾಯ ಆಗಬಾರದು” ಎಂದು ಆಗ್ರಹಿಸಿದ್ದಾರೆ.

ಜನಾಝ ನಮಾಝ್
ಮೃತರ ಮಯ್ಯತ್ ಅನ್ನು ಇಂದು ರಾತ್ರಿ 9 ಗಂಟೆ ಸುಮಾರಿಗೆ ಪರಪ್ಪು ಮಸೀದಿಯ ವರಾಂಡದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜನಾಝ ನಮಾಝ್‌ನಲ್ಲಿ ಭಾಗವಹಿಸಬೇಕಾಗಿ ಕುಟುಂಬದವರು ವಿನಂತಿಸಿದ್ದಾರೆ.

ಸೂಚನೆ: ಇದು ಕುಟುಂಬದವರು ಮತ್ತು ಸ್ಥಳೀಯರು ಮಾಡಿರುವ ಆರೋಪವಾಗಿದೆ. ಪೊಲೀಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ನೈಜ ಕಾರಣ ತಿಳಿಯಲಿದೆ. ಆಸ್ಪತ್ರೆಯ ಆಡಳಿತ ಮಂಡಳಿಯ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

About The Author

Leave a Reply