June 6, 2026
06-06-26-TA-dks

ಬೆಂಗಳೂರು: ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಕುರಿತ ಅಸಮಾಧಾನದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರ ರಾಜಕೀಯ ನಡೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ಇದೀಗ ಈ ಬೆಳವಣಿಗೆ ಹೊಸ ತಿರುವು ಪಡೆದುಕೊಂಡಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ನಡುವೆ ನಡೆದ ಮಧ್ಯರಾತ್ರಿಯ ಸುದೀರ್ಘ ಸಂಧಾನ ಮಾತುಕತೆ ಕುತೂಹಲ ಹೆಚ್ಚಿಸಿದೆ.ಶುಕ್ರವಾರ ರಾತ್ರಿ ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಸುಮಾರು ಎರಡೂವರೆ ಗಂಟೆಗಳ ಕಾಲ ಮುಖಾಮುಖಿ ಚರ್ಚೆ ನಡೆಸಿದರು. ರಾತ್ರಿ 11 ಗಂಟೆಗೆ ಆರಂಭವಾದ ಸಭೆ ಮುಂಜಾನೆ 1.30ರವರೆಗೆ ಮುಂದುವರಿದಿದ್ದು, ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಈ ಸಂಧಾನ ಸಭೆ ನಡೆದಿರುವ ಮಾಹಿತಿ ಲಭ್ಯವಾಗಿದೆ.ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವ ಭರವಸೆ ಈಡೇರಿಲ್ಲ ಎಂಬ ಕಾರಣಕ್ಕೆ ರಾಮಲಿಂಗಾ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. “ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದರೆ ಮಾತ್ರ ಸಚಿವನಾಗಿ ಮುಂದುವರಿಯುತ್ತೇನೆ, ಇಲ್ಲವಾದರೆ ಸಚಿವ ಸ್ಥಾನವೇ ಬೇಡ” ಎಂದು ಅವರು ಸ್ಪಷ್ಟವಾಗಿ ಹೇಳಿ ರಾಜೀನಾಮೆ ಸಲ್ಲಿಸಿದ್ದರು.2023ರಲ್ಲೇ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ತಮ್ಮ ನಿವಾಸಕ್ಕೆ ಭೇಟಿ ನೀಡಿ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಭರವಸೆ ನೀಡಿದ್ದರು ಎಂದು ರಾಮಲಿಂಗಾ ರೆಡ್ಡಿ ಬಹಿರಂಗವಾಗಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಡಿಕೆ ಶಿವಕುಮಾರ್, “ಭರವಸೆ ನೀಡಿರುವುದು ಸತ್ಯ. ಆದರೆ ಖಾತೆ ಬದಲಾವಣೆ ಕುರಿತ ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ” ಎಂದು ಸ್ಪಷ್ಟಪಡಿಸಿದ್ದರು.ಮಧ್ಯರಾತ್ರಿ ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಯಾವುದೇ ಆತಂಕ ಬೇಡ. ನಾವೆಲ್ಲಾ ಹಳೆಯ ಸ್ನೇಹಿತರು. ಕೂತು ಮಾತನಾಡಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದೇವೆ” ಎಂದು ತಿಳಿಸಿದರು. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಸಿಎಂ, “ಎಲ್ಲವನ್ನೂ ಈಗ ಹೇಳಬೇಕಾಗಿಲ್ಲ” ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ರಾಮಲಿಂಗಾ ರೆಡ್ಡಿ ಕೂಡ, “ಮುಖ್ಯಮಂತ್ರಿಗಳು ಹೇಳಿದ್ದನ್ನೇ ನಾನು ಹೇಳುತ್ತೇನೆ. ಎಲ್ಲಾ ಗೊಂದಲಗಳು ನಿವಾರಣೆಯಾಗಿವೆ” ಎಂದು ಹೇಳಿ ಹೆಚ್ಚಿನ ಮಾಹಿತಿ ನೀಡದೆ ಸ್ಥಳದಿಂದ ತೆರಳಿದರು.ಈ ಬೆಳವಣಿಗೆಯ ನಡುವೆ ಸಚಿವ ಸತೀಶ್ ಜಾರಕಿಹೊಳಿ ಪಕ್ಷದೊಳಗೆ ಇನ್ನೂ ಮೂವರು ನಾಯಕರಲ್ಲಿ ಅಸಮಾಧಾನವಿದೆ ಎಂದು ಹೇಳಿರುವುದು ಗಮನ ಸೆಳೆದಿದೆ. ಮತ್ತೊಂದೆಡೆ ಹಿರಿಯ ಸಚಿವ ಎಚ್.ಕೆ. ಪಾಟೀಲ್, ಈ ಬೆಳವಣಿಗೆಯನ್ನು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಎಂದು ವಿಶ್ಲೇಷಿಸಿದ್ದಾರೆ. ಮಧ್ಯರಾತ್ರಿಯ ಸಂಧಾನ ಯಶಸ್ವಿಯಾಗಿದೆ ಎಂಬ ಸಂದೇಶ ಹೊರಬಿದ್ದಿದ್ದರೂ, ರಾಮಲಿಂಗಾ ರೆಡ್ಡಿ ಅಧಿಕೃತವಾಗಿ ತಮ್ಮ ರಾಜೀನಾಮೆ ವಾಪಸ್ ಪಡೆಯುವರೇ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಒಳರಾಜಕೀಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾವ ದಿಕ್ಕು ಪಡೆಯಲಿವೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮುಂದುವರಿದಿದೆ.

About The Author

Leave a Reply