

ಗಂಗಾವತಿ : ಆನ್‌ಲೈನ್ ಗೇಮ್ ಆಡುವುದನ್ನು ವಿರೋಧಿಸಿ ಬುದ್ಧಿವಾದ ಹೇಳಿದ ಒಂದೇ ಕಾರಣಕ್ಕೆ, ಜನ್ಮ ನೀಡಿದ ತಂದೆ ಮತ್ತು ಒಡಹುಟ್ಟಿದ ಅಕ್ಕನನ್ನೇ ಚಾಕುವಿನಿಂದ ಇರಿದು ಕ್ರೂರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ತಾಯಿಗೂ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಪಾಪಿ ಮಗ, ಬಳಿಕ ತನಗೂ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಘಟನೆಯಲ್ಲಿ ತಂದೆ ವೆಂಕಟನಾಯ್ಡು (45) ಹಾಗೂ ಅಕ್ಕ ಪ್ರಗತಿ (19) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ತಾಯಿ ಸೌಜನ್ಯ ಅವರ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸದ್ಯ ಆರೋಪಿ ಸಾಯಿವೆಂಕಟ ಮಣಿದೀಪ (18) ಹಾಗೂ ತಾಯಿ ಸೌಜನ್ಯ ಇಬ್ಬರಿಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮೃತ ವೆಂಕಟನಾಯ್ಡು ಅವರು ಹೊಸ ಅಯೋಧ್ಯೆ ಗ್ರಾಮದಲ್ಲಿ ವಾಸವಾಗಿದ್ದು, ಖಾಸಗಿ ಶಾಲೆಯೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಎಂದಿನಂತೆ ವೆಂಕಟನಾಯ್ಡು, ಪತ್ನಿ, ಇಬ್ಬರು ಮಕ್ಕಳು ಹಾಗೂ ವೆಂಕಟನಾಯ್ಡು ಅವರ ಪೋಷಕರು ಒಟ್ಟಿಗೆ ಕುಳಿತು ಹಣ್ಣು ತಿಂದು, ಊಟ ಮುಗಿಸಿದ್ದಾರೆ. ಬಳಿಕ ವೆಂಕಟನಾಯ್ಡು ಕುಟುಂಬದ ನಾಲ್ವರು ಒಂದು ಕೊಠಡಿಯಲ್ಲಿ ಹಾಗೂ ಅವರ ಪೋಷಕರು ಮತ್ತೊಂದು ಕೊಠಡಿಯಲ್ಲಿ ಮಲಗಿದ್ದಾರೆ.ರಾತ್ರಿ 10.30ರ ಸುಮಾರಿಗೆ ವೆಂಕಟನಾಯ್ಡು ಮಲಗಿದ್ದ ಕೊಠಡಿಯಿಂದ ಚೀರಾಟ ಮತ್ತು ಗಲಾಟೆಯ ಸದ್ದು ಕೇಳಿಸಿದೆ. ಬಾಗಿಲು ತೆರೆಯುವಂತೆ ವೆಂಕಟನಾಯ್ಡು ರಕ್ಷಣೆಗೆ ಕಿರುಚಾಡಿದ್ದಾರೆ. ಸದ್ದು ಕೇಳಿ ಓಡಿಬಂದ ವೆಂಕಟನಾಯ್ಡು ಅವರ ತಂದೆ ತಾತಾರಾವ್ ಬಾಗಿಲು ತೆರೆಯಲು ಯತ್ನಿಸಿದರೂ ಒಳಗಿನಿಂದ ಲಾಕ್ ಆಗಿದ್ದರಿಂದ ಸಾಧ್ಯವಾಗಿಲ್ಲ. ತಕ್ಷಣವೇ ಅವರು ನೆರೆಹೊರೆಯವರ ಸಹಾಯ ಪಡೆದು ಬಾಗಿಲು ಮುರಿದು ಒಳಹೋದಾಗ ಇಡೀ ಕೊಠಡಿ ರಕ್ತದ ಮಡುವಾಗಿ ಮಾರ್ಪಟ್ಟಿತ್ತು. ತಂಗಿ ಪ್ರಗತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ತಂದೆ ವೆಂಕಟನಾಯ್ಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.ಮೊಮ್ಮಗ ಸಾಯಿವೆಂಕಟ ಮಣಿದೀಪ ಆನ್‌ಲೈನ್ ಗೇಮ್ ವ್ಯಸನಿಯಾಗಿದ್ದ. ಅದಕ್ಕೆ ಬುದ್ಧಿ ಹೇಳಿದ್ದಕ್ಕೆ ರಾತ್ರಿ ಏಕಾಏಕಿ ಸಿಟ್ಟಿಗೆ ಬಂದು ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಈ ಕ್ರೂರ ಕೃತ್ಯ ಎಸಗಿದ್ದಾನೆ. ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಮೃತರ ತಂದೆ ತಾತಾರಾವ್ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್. ಅರಸಿದ್ಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಕುಟುಂಬದ ಒಳಗಿನ ಕಲಹ ಮತ್ತು ಗೇಮ್ ವ್ಯಸನವೇ ಈ ಭೀಕರ ಹತ್ಯಾಕಾಂಡಕ್ಕೆ ಕಾರಣ ಎಂದು ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.






