

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಒಂದೂವರೆ ವರ್ಷದ ಹಿಂದೆ ತಿಂಗಳಿಗೊಂದು ಫ್ಲ್ಯಾಟ್, ಕಾರು, ಬೈಕ್, ಚಿನ್ನ ಬಹುಮಾನದ ಆಮಿಷವನ್ನು ನೀಡಿ ಗ್ರಾಹಕರನ್ನು ಸೆಳೆದ ನಕಲಿ ಲಕ್ಕಿ ಸ್ಕೀಮ್‌ಗಳು ಗ್ರಾಹಕರಿಗೆ ಕೋಟ್ಯಂತರ ರೂ. ವಂಚಿಸಿದ್ದಲ್ಲದೆ, ಇದೀಗ ಸ್ಕೀಮ್ ಕಚೇರಿಗೆ ಅಂತಿಮ ಮುದ್ರೆ ಹಾಕುವ ಹಂತದಲ್ಲಿದೆ.
ಮಂಗಳೂರು, ಉಳ್ಳಾಲ, ಕೋಣಾಜೆ, ಕಣ್ಣೂರು, ಬಿ.ಸಿ. ರೋಡು, ಪುತ್ತೂರು ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಈ ಸ್ಕೀಮ್‌ಗಳು ಆರಂಭಗೊಂಡಿದ್ದವು. ತುಳು ಚಿತ್ರರಂಗದ ಕೆಲ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ನಡೆಸಿ ಸಾವಿರಾರು ಸದಸ್ಯರನ್ನು ಸೆಳೆಯಲಾಗಿತ್ತು. ಪ್ರತಿ ತಿಂಗಳು 1,000 ಕಂತಿನಂತೆ 12 ತಿಂಗಳು ಹಣ ಪಾವತಿಸುವ ಯೋಜನೆ ರೂಪಿಸಲಾಗಿತ್ತು. ಸಂಗ್ರಹವಾದ ಮೊತ್ತದಿಂದ ಫ್ಲ್ಯಾಟ್, ಕಾರು, ಬೈಕ್, ಚಿನ್ನ, ನಗದು ಸೇರಿದಂತೆ 50 ಲಕ್ಷಕ್ಕೂ ಅಧಿಕ ಮೌಲ್ಯದ ಬಹುಮಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಯೋಜನೆಯ ಅವಧಿ ಪೂರ್ಣಗೊಂಡ ಬಳಿಕ ಸದಸ್ಯರಿಗೆ ಮೂಲಧನದೊಂದಿಗೆ ಒಂದು ಅಥವಾ ಎರಡು ಸಾವಿರ ಸೇರಿಸಿ ನೀಡುವುದಾಗಿ ಅಥವಾ ಸಮಾನ ಮೌಲ್ಯದ ಚಿನ್ನ ಹಿಂತಿರುಗಿಸುವುದಾಗಿ ಹೇಳಲಾಗಿತ್ತು.
ಕೆಲವು ಸ್ಕೀಮ್‌ಗಳ ಅವಧಿ ಮುಗಿದು ತಿಂಗಳು 4-5 ಕಳೆದಿದ್ದು, ಇನ್ನೂ ಹಣ ವಾಪಸ್ ನೀಡಿಲ್ಲ. ಇದರಿಂದ ಸ್ಕೀಮ್ ಸದಸ್ಯರು ಕಚೇರಿಗೆ, ಸ್ಕೀಮ್ ಮುಖ್ಯಸ್ಥರ ಮನೆಗೆ ಅಲೆದಾಟ ಮಾಡುತ್ತಿರುವುದಲ್ಲದೆ, ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ. ಆದರೆ ಸ್ಕೀಮ್ ಮುಖ್ಯಸ್ಥರು ನಮ್ಮ ಬ್ಯಾಂಕ್ ಖಾತೆ ಫ್ರೀಜ್ (ತಡೆ) ಮಾಡಲಾಗಿದೆ. ಇದರಿಂದ ಬ್ಯಾಂಕ್‌ನಿಂದ ಹಣ ತೆಗೆಯಲು ಆಗುತ್ತಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ.






