June 28, 2026
image-20

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಮೈಸೂರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಜನರಿಂದ ದೊರೆತ ಅದ್ದೂರಿ ಸ್ವಾಗತಕ್ಕೆ ಭಾವುಕರಾಗಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮನದಾಳದ ಸಂದೇಶ ಹಂಚಿಕೊಂಡಿದ್ದಾರೆ.

“ಮುಖ್ಯಮಂತ್ರಿಯ ಸಿಂಹಾಸನ ನಶ್ವರ. ಆದರೆ ಜನರ ಹೃದಯದಲ್ಲಿ ನನಗೆ ದೊರೆತಿರುವ ಸ್ಥಾನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬುವ ಜನತಾ ಜನಾರ್ಧನರ ನಡುವಿನ ಶಾಶ್ವತ ಒಪ್ಪಂದ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ಸಾರ್ವಜನಿಕ ಜೀವನದಲ್ಲಿ ಅಧಿಕಾರವನ್ನು ಜನಸೇವೆಗೆ ಸಿಕ್ಕಿರುವ ಅಮೂಲ್ಯ ಅವಕಾಶವೆಂದು ಪರಿಗಣಿಸಿದ್ದೇನೆ. ಮುಖ್ಯಮಂತ್ರಿ ಹುದ್ದೆಯಿಂದ ಹಿಂದೆ ಸರಿದ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ತೋರಿಸುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ನನ್ನ ಜೀವನದ ದೊಡ್ಡ ಸಂಪತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಮೈಸೂರಿಗೆ ಭೇಟಿ ನೀಡಿದ ವೇಳೆ ಸಾವಿರಾರು ಅಭಿಮಾನಿಗಳು ನೀಡಿದ ಆತ್ಮೀಯ ಸ್ವಾಗತ ತಮ್ಮನ್ನು ಭಾವುಕರನ್ನಾಗಿಸಿದೆ ಎಂದು ಅವರು ತಿಳಿಸಿದ್ದಾರೆ. “ಅಧಿಕಾರ ಮತ್ತು ಸಂಪತ್ತು ಕಾಲಕ್ರಮೇಣ ಕಳೆದುಹೋಗಬಹುದು. ಆದರೆ ಜನರ ಪ್ರೀತಿ ಮಾತ್ರ ಶಾಶ್ವತ. ನನ್ನ ಸಾರ್ವಜನಿಕ ಬದುಕಿನಲ್ಲಿ ಗಳಿಸಿರುವ ಈ ಜನಪ್ರೀತಿಯೇ ನನ್ನ ನಿಜವಾದ ಸಂಪತ್ತು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ರಾಜ್ಯದ ಮೂಲೆಮೂಲೆಗಳಿಂದ ಯಾವುದೇ ನಿರೀಕ್ಷೆಯಿಲ್ಲದೆ ಪ್ರೀತಿ ಮತ್ತು ವಿಶ್ವಾಸ ತೋರುತ್ತಿರುವ ಜನರ ಸೇವೆಗೆ ತಾವು ಸದಾ ಬದ್ಧರಾಗಿರುವುದಾಗಿ ಅವರು ಭರವಸೆ ನೀಡಿದ್ದಾರೆ. ಇದೇ ವೇಳೆ, ಮೈಸೂರಿನಲ್ಲಿ ಅಭಿಮಾನಿಗಳು ನೀಡಿದ ಅದ್ದೂರಿ ಸ್ವಾಗತದ ವಿಡಿಯೋವನ್ನೂ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಶನಿವಾರ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಹೈವೇ ಸರ್ಕಲ್‌ನಲ್ಲಿ ಸಾವಿರಾರು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು. ಬೃಹತ್ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಸ್ಥಳೀಯ ಶಾಸಕರಾದ ತನ್ವೀರ್ ಸೇಠ್ ಹಾಗೂ ಹರೀಶ್ ಗೌಡ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಮಾಜಿ ಮುಖ್ಯಮಂತ್ರಿಗೆ ಆತ್ಮೀಯ ಸ್ವಾಗತ ಕೋರಿದರು.ಜನರ ಅಪಾರ ಬೆಂಬಲ ಮತ್ತು ಅಭಿಮಾನವೇ ತಮ್ಮ ಸಾರ್ವಜನಿಕ ಜೀವನದ ಶಕ್ತಿ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದು, ಅವರ ಈ ಭಾವುಕ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

About The Author

Leave a Reply