August 1, 2026
WhatsApp Image 2026-08-01 at 12.03.09 PM

ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್‌ಫುಡ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆರೋಗ್ಯ ಸಚಿವ ಯು.ಟಿ. ಖಾದರ್ ಆದೇಶ ಹೊರಡಿಸಿದ್ದಾರೆ.

ಹೆಚ್ಚು ಕೊಬ್ಬಿನಂಶ ಇರುವ ಆಹಾರಗಳ ಕುರಿತು ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿದಾಗ ರಾಜ್ಯದ 134 ಶಾಲಾ-ಕಾಲೇಜುಗಳು ತಮ್ಮದೇ ಸ್ವಂತ ಕ್ಯಾಂಟಿನ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅನಾರೋಗ್ಯಕರ ಜಂಕ್‌ಫುಡ್‌ಗಳನ್ನು ಮಾರಾಟ ಮಾಡುತ್ತಿರುವುದು ತಿಳಿದುಬಂದಿತ್ತು.

ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸರ್ಕಾರದ ಆದೇಶ ಮೀರಿಯೂ ಜಂಕ್‌ಫುಡ್ ಮಾರಾಟ ಮುಂದುವರಿಸಿದರೆ ಭಾರೀ ದಂಡ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹೊಸದಾಗಿ ವ್ಯಾಪಾರಿಗಳಿಗೆ ಮತ್ತು ಕ್ಯಾಂಟಿನ್‌ಗಳಿಗೆ ಲೈಸೆನ್ಸ್ ನೀಡುವಾಗಲೇ ಶಾಲಾ-ಕಾಲೇಜುಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್‌ಫುಡ್ ಮಾರಾಟ ಮಾಡಬಾರದು ಎಂಬ ನಿಯಮವನ್ನು ಕಡ್ಡಾಯಗೊಳಿಸಲಾಗುವುದಾಗಿ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆಯಿಂದಲೇ ಈ ಸಂಬಂಧ ನೋಟಿಸ್ ನೀಡಲಾಗುವುದು. ಶಾಲೆಯ 50 ಮೀಟರ್ ಅಂತರದಲ್ಲಿ ಯಾವ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ ಮತ್ತು ಯಾವುದಕ್ಕೆ ನಿಷೇಧವಿದೆ ಎಂಬುದರ ಸ್ಪಷ್ಟ ಮಾರ್ಗಸೂಚಿಯನ್ನು ಆದೇಶದಲ್ಲಿ ತಿಳಿಸಲಾಗುವುದು.

ಜಂಕ್‌ಫುಡ್ ನಿಷೇಧದ ಜತೆಗೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮತ್ತೊಂದು ಮಹತ್ವದ ಆದೇಶ ನೀಡಲಾಗಿದ್ದು, ಇನ್ನು ಮುಂದೆ ರಾಜ್ಯದ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಕ್ಯಾಂಟಿನ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿನೀರು ಒದಗಿಸಬೇಕೆಂದು ಸಚಿವ ಯು.ಟಿ. ಖಾದರ್ ಆದೇಶಿಸಿದ್ದಾರೆ.

About The Author

Leave a Reply