September 15, 2026
WhatsApp Image 2026-08-03 at 10.10.05 AM

ಉತ್ತರ ಪ್ರದೇಶದ ಅಯೋಧ್ಯೆಯ ರಾಜರ್ಷಿ ದಶರಥ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಸುವ ವಿಧಾನವನ್ನು ವಿವರಿಸುವ ಆತಂಕಕಾರಿ ಕೈಬರಹದ ಚೀಟಿಯೊಂದು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ವಿದ್ಯಾರ್ಥಿಯನ್ನು ಬಲರಾಮ್‌ಪುರ ಮೂಲದ ಸರ್ಫರಾಜ್ ಖಾನ್ ಎಂದು ಗುರುತಿಸಲಾಗಿದೆ. ಈತ ಕಾಲೇಜಿನಲ್ಲಿ 2025ರ ಬ್ಯಾಚ್‌ನ ಎಕ್ಸ್-ರೇ ಟೆಕ್ನಿಷಿಯನ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಎಕ್ಸ್-ರೇ ಕೊಠಡಿಯಲ್ಲಿ ಪತ್ತೆಯಾಯ್ತು ರಹಸ್ಯ ಚೀಟಿ

ಶನಿವಾರ ಬೆಳಿಗ್ಗೆ ಕಾಲೇಜಿನ ಎಕ್ಸ್-ರೇ ಕೊಠಡಿಗೆ ಕರ್ತವ್ಯಕ್ಕಾಗಿ ಆಗಮಿಸಿದ ಕೆಲವು ವಿದ್ಯಾರ್ಥಿಗಳಿಗೆ ಈ ಅನುಮಾನಾಸ್ಪದ ಚೀಟಿ ಸಿಕ್ಕಿದೆ. ಆ ಚೀಟಿಯಲ್ಲಿ ಬಾಂಬ್ ತಯಾರಿಸಲು ಬೇಕಾಗುವ ವಸ್ತುಗಳಾದ ಅಮೋನಿಯಂ ಕಾರ್ಬೋನೇಟ್, ಗೇಜ್ ವೈರ್, ರೆಡ್ ಸಲ್ಫೈಡ್ ಮುಂತಾದ ರಾಸಾಯನಿಕ ಹಾಗೂ ಸಾಧನಗಳ ಕುರಿತು ವಿವರವಾದ ಮಾಹಿತಿಯನ್ನು ಬರೆಯಲಾಗಿತ್ತು. ವಿದ್ಯಾರ್ಥಿಗಳು ಕೂಡಲೇ ಈ ವಿಷಯವನ್ನು ತಮ್ಮ ಮೇಲ್ವಿಚಾರಕರಿಗೆ ತಿಳಿಸಿದ್ದು, ಬಳಿಕ ಕಾಲೇಜು ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಕಾಲೇಜಿನ ಮುಖ್ಯ ವೈದ್ಯಕೀಯ ಸೂಪರಿಂಟೆಂಡೆಂಟ್ (ಸಿಎಂಎಸ್) ಡಾ. ಅರವಿಂದ್ ಸಿಂಗ್, “ಬೆಳಿಗ್ಗೆ ಎಕ್ಸ್-ರೇ ಕೊಠಡಿಯಲ್ಲಿ ಬಾಂಬ್ ತಯಾರಿಕೆಗೆ ಸಂಬಂಧಿಸಿದ ಅನುಮಾನಾಸ್ಪದ ಟಿಪ್ಪಣಿ ಸಿಕ್ಕ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ನಾವು ತಕ್ಷಣ ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ಸರ್ಫರಾಜ್ ಖಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಮತ್ತು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

ದೆಹಲಿ ಕೆಂಪುಕೋಟೆ ಸ್ಫೋಟದ ಘಟನೆ ಮರುಕಳಿಸುವ ಭೀತಿ!

ಅಯೋಧ್ಯೆಯ ಈ ಘಟನೆಯು ಕಳೆದ ವರ್ಷ ದೆಹಲಿಯ ಕೆಂಪುಕೋಟೆ ಬಳಿ ನಡೆದ ಭೀಕರ ಸ್ಫೋಟದ ನೆನಪನ್ನು ಮರುಕಳಿಸುವಂತೆ ಮಾಡಿದೆ. ನವೆಂಬರ್ 10 ರಂದು ನಡೆದಿದ್ದ ಆ ಸ್ಫೋಟದಲ್ಲಿ 15 ಜನರು ಪ್ರಾಣ ಕಳೆದುಕೊಂಡಿದ್ದರು. ಆ ಪ್ರಕರಣದ ತನಿಖೆ ನಡೆಸಿದ ಭದ್ರತಾ ಸಂಸ್ಥೆಗಳು ಹರ್ಯಾಣದ ಫರೀದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಮೂವರು ವೈದ್ಯರು ಸೇರಿದಂತೆ ನೌಕರರ ಪಾತ್ರವನ್ನು ಬಯಲಿಗೆಳೆದಿದ್ದವು.

ಪ್ರಸ್ತುತ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಅಧ್ಯಕ್ಷ ಜಾವೇದ್ ಅಹ್ಮದ್ ಸಿದ್ದಿಕಿಯನ್ನು ಜಾರಿ ನಿರ್ದೇಶನಾಲಯ (ED) ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ. ಸಿದ್ದಿಕಿ ತನ್ನ ಪತ್ನಿಯ ಅನಾರೋಗ್ಯದ ಕಾರಣ ನೀಡಿ ಸಲ್ಲಿಸಿದ್ದ 6 ವಾರಗಳ ಮಧ್ಯಂತರ ಜಾಮೀನು ಅರ್ಜಿಯನ್ನು ಇತ್ತೀಚೆಗಷ್ಟೇ ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಈಗ ವೈದ್ಯಕೀಯ ಶಿಕ್ಷಣ ಸಂಸ್ಥೆಯೊಂದರಲ್ಲೇ ಮತ್ತೆ ಇಂತಹ ಆತಂಕಕಾರಿ ಘಟನೆ ನಡೆದಿರುವುದು ಭದ್ರತಾ ಸಂಸ್ಥೆಗಳ ನಿದ್ದೆಗೆಡಿಸಿದೆ.

About The Author

Leave a Reply