August 19, 2026
images (4)

ಮಂಗಳೂರು: ಸುಮಾರು 15 ವರ್ಷಗಳಿಂದ ನ್ಯಾಯಾಲಯದ ಎಲ್‌ಪಿಸಿ (LPC) ವಾರೆಂಟ್‌ಗೆ ತಲೆಮರೆಸಿಕೊಂಡಿದ್ದ ಆರೋಪಿತೆಯನ್ನು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ 2011ರಲ್ಲಿ ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ ಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಮಂಗಳೂರಿನ 3ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ SPLIT CC ನಂ. 02/2014ರಂತೆ ವಿಚಾರಣೆಯಾಗಿ, LPC ನಂ. 10/2019ರಂತೆ ದೀರ್ಘಕಾಲದಿಂದ ಬಾಕಿ ಉಳಿದಿತ್ತು.

ಪ್ರಕರಣದ ಎಲ್‌ಪಿಸಿ ವಾರೆಂಟ್ ಆರೋಪಿತೆಯಾಗಿದ್ದ ಆಯಿಷಾ (36), ಪತಿ ಹಸನಬ್ಬ, ಬಂಗ್ಲಗುಡ್ಡೆ ಮನೆ, ಗುರುಪುರ, ಮಂಗಳೂರು ಎಂಬ ವಿಳಾಸವನ್ನು ನೀಡಿದ್ದರು. ಪ್ರಕರಣ ದಾಖಲಾಗಿ ದಸ್ತಗಿರಿಯಾದ ಸಂದರ್ಭದಲ್ಲಿ ತಮ್ಮ ನಿಜವಾದ ಹೆಸರು, ಪತಿಯ ಹೆಸರು ಹಾಗೂ ವಿಳಾಸವನ್ನು ಮರೆಮಾಚಿ ಸುಳ್ಳು ಮಾಹಿತಿ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆರೋಪಿತೆಯ ನಿಜವಾದ ಹೆಸರು ಸೆಫಿಯಾ (53), ಪತಿ ದಿವಂಗತ ಅಬೂಬುಕ್ಕರ್, ಹಂಡೇಲ ಮಸೀದಿ ಬಳಿ, ಪುತ್ತಿಗೆ ಗ್ರಾಮ, ಬಡಗಮಿಜಾರು, ಮಿಜಾರು, ಮೂಡಬಿದರೆ ತಾಲೂಕು, ಮಂಗಳೂರು ಎಂಬುದು ಪತ್ತೆಯಾಗಿದೆ. ಹೆಸರು ಹಾಗೂ ವಿಳಾಸ ಬದಲಿಸಿಕೊಂಡು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿತೆಯ ಬೆರಳಚ್ಚನ್ನು ಮಂಗಳೂರು ಬೆರಳಚ್ಚು ಘಟಕದ ತಜ್ಞರಿಂದ ಪರಿಶೀಲಿಸಲಾಗಿದ್ದು, ಆಯಿಷಾ ಹೆಸರಿನಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2011ರ ಪ್ರಕರಣದ ಕಡತದಲ್ಲಿನ ಬೆರಳಚ್ಚಿನೊಂದಿಗೆ ಹೋಲಿಕೆಯಾಗಿರುವುದಾಗಿ ತಜ್ಞರು ವರದಿ ನೀಡಿದ್ದಾರೆ.

ಈ ವರದಿಯ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಆರೋಪಿತೆಯನ್ನು ಪತ್ತೆಹಚ್ಚಿ ಆಗಸ್ಟ್ 18, 2026ರಂದು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿತೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Leave a Reply