August 21, 2026
WhatsApp Image 2026-08-21 at 9.28.27 AM

ಬಂಟ್ವಾಳದ ಇರಾಕೋಡಿಯಲ್ಲಿ ನಡೆದಿದ್ದ ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣದಲ್ಲಿ ‘ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ’ (ಕೊಕಾ) ಅಡಿಯಲ್ಲಿ ಆರೋಪಿಗಳಾಗಿದ್ದ ಐವರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು .

ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಆರೋಪಿಗಳಾದ ಪವನ್ ಮಾರುತಿ ಗಾಯಕ್ವಾಡ್ (ಎ19), ಅನಂತ ನಾಗೋಜಿ ಸಾವಂತ್ (ಎ21), ಬಿಟ್ಟಪ್ಪ ನಾಗಪ್ಪ ತರಿಹಾಳ (ಎ22), ಎಂ. ನವೀನ್ ಕುಮಾರ್ (ಎ23) ಹಾಗೂ ಸಾಗರದ ನಿವಾಸಿ ಪ್ರಕರಣದ 20ನೇ ಆರೋಪಿ ಪ್ರತಿಮಾ ಎ.ಎನ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ಪುರಸ್ಕರಿಸಿದೆ.

ಪ್ರಕರಣದಲ್ಲಿ ಕೊಕಾ ಅನ್ವಯಿಸಲಾಗಿದೆ ಎಂಬ ಮಾತ್ರಕ್ಕೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗದು. ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧ ಕೊಕಾ ನಿಬಂಧನೆಗಳು ನೇರವಾಗಿ ಅನ್ವಯವಾಗುವುದಿಲ್ಲ ಎಂದಾದರೆ, ಕಾಯ್ದೆಯ ಸೆಕ್ಷನ್ 22(3) ಅಡಿಯಲ್ಲಿನ ನಿರ್ಬಂಧವು ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಇದೇ ವೇಳೆ, ಆದೇಶದ ಪ್ರತಿ ದೊರೆತ 15 ದಿನಗಳ ಒಳಗೆ ಅರ್ಜಿದಾರ ಆರೋಪಿಗಳು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಹಾಗೂ ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶೂರಿಟಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೆ ನಿಯಮಿತವಾಗಿ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕುವುದಾಗಲಿ ಅಥವಾ ಸಾಕ್ಷ್ಯ ನಾಶಪಡಿಸುವುದಾಗಲಿ ಮಾಡಬಾರದು, ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಭವಿಷ್ಯದಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್, ಪ್ರಕರಣದ ಪ್ರಮುಖ ಆರೋಪಿಗಳಿಗೆ (ಎ6, ಎ9 ರಿಂದ 13) ಆಶ್ರಯ ನೀಡಿ, ಊಟ ಹಾಗೂ ಪ್ರಯಾಣಕ್ಕೆ ಹಣ ನೀಡಿದ್ದಾರೆ ಎಂಬ ಆರೋಪವಷ್ಟೇ ಅರ್ಜಿದಾರರ ಮೇಲಿದೆ. ಅರ್ಜಿದಾರರಿಗೆ ಯಾವುದೇ ಅಪರಾಧಿಕ ಹಿನ್ನೆಲೆಗಳಿಲ್ಲ ಹಾಗೂ ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಪ್ರಕರಣದ ಹಿನ್ನೆಲೆ :

2025ರ ಮೇ 27ರಂದು ಸುಹಾಸ್ ಶೆಟ್ಟಿ ಕೊಲೆ ಪ್ರತೀಕಾರವಾಗಿ ಅಬ್ದುಲ್ ರಹ್ಮಾನ್ ಎಂಬುವರನ್ನು ಹತ್ಯೆ ಮಾಡಲಾಗಿತ್ತು ಮತ್ತು ಕಲಂದ‌ರ್ ಶಾಫಿ ಎಂಬುವರಿಗೆ ಗಾಯಗೊಳಿಸಲಾಗಿತ್ತು. ಈ ಸಂಬಂಧ ಮೃತನ ಸ್ನೇಹಿತ ಮುಹಮ್ಮದ್ ನಿಸಾರ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಆರಂಭದಲ್ಲಿ 14 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಂತರ ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಕೊಕಾ ಕಾಯ್ದೆ ಸೇರ್ಪಡೆಗೊಳಿಸಿದ್ದರು. ಬಳಿಕ ಎರಡನೇ ಹೆಚ್ಚುವರಿ ಆರೋಪಪಟ್ಟಿಯಲ್ಲಿ ನಾಲ್ವರು ಅರ್ಜಿದಾರರನ್ನು ಆರೋಪಿಗಳನ್ನಾಗಿ ಸೇರಿಸಲಾಗಿತ್ತು. ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

About The Author

Leave a Reply