August 23, 2026
WhatsApp Image 2026-08-23 at 10.27.31 AM (1)

ಪುತ್ತೂರಿನ ದರ್ಬೆಯಲ್ಲಿ ಆಗಸ್ಟ್ 21ರಂದು ನಡೆದ ಗಲಾಟೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಲ್ಲೆ, ಬೆದರಿಕೆ ಹಾಗೂ ಪರಿಸ್ಥಿತಿ ನಿಯಂತ್ರಿಸಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ.

ಸುಳ್ಯದ ಜಾಲ್ಸೂರಿನ ನಿವಾಸಿ ಫಾತಿಮತ್ ಮಿಸ್ವಾನ (32) ನೀಡಿದ ದೂರಿನ ಪ್ರಕಾರ, ಅವರು ಆಗಸ್ಟ್ 21ರಂದು ತಮ್ಮ ಸಹೋದರ ಹಾಗೂ ಸಹೋದರಿಯೊಂದಿಗೆ ಪುತ್ತೂರಿಗೆ ಬಂದಿದ್ದರು. ಮಧ್ಯಾಹ್ನ ದರ್ಬೆಯಲ್ಲಿರುವ ಡ್ರೀಮ್ ಡೆಸ್ಟಿನೇಷನ್ ಜನಸೇವಾ ಕೇಂದ್ರದಲ್ಲಿ ಕೆಲವು ದಾಖಲೆಗಳನ್ನು ಪ್ರಿಂಟ್ ಮತ್ತು ಲ್ಯಾಮಿನೇಷನ್ ಮಾಡಲು ನೀಡಿದ್ದರು.ನಂತರ ದಾಖಲೆಗಳನ್ನು ಪಡೆಯಲು ಮರಳಿ ಬಂದಾಗ, ಒಂದು ದಾಖಲೆಗೆ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ಪ್ರಶ್ನಿಸಿದ ಅವರು, ದಾಖಲೆಯನ್ನು ಸರಿಪಡಿಸಿಕೊಡಬೇಕು ಅಥವಾ ಹೊಸ ದಾಖಲೆ ಪಡೆಯಲು ₹300 ನೀಡಬೇಕು ಎಂದು ಕೇಳಿದ್ದಾರೆ.ಈ ವಿಚಾರವಾಗಿ ಅಂಗಡಿಯಲ್ಲಿದ್ದ ಅಂಜನಾ ಪೈ ಮತ್ತು ಸುದರ್ಶನ್ ಪೈ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸುದರ್ಶನ್ ಪೈ ಅವರು ದೂರುದಾರರು ಹಾಗೂ ಅವರ ಸಹೋದರಿಗೆ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಗಲಾಟೆಯನ್ನು ಬಿಡಿಸಿದ್ದಾರೆ. ಬಳಿಕ ಫಾತಿಮತ್ ಮಿಸ್ವಾನಾ, ಅವರ ಸಹೋದರಿ ಹಾಗೂ ಸಹೋದರರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 97/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 352, 115(2), 109 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸುದರ್ಶನ್ ಪೈ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪ್ರಕರಣ ಸಂಖ್ಯೆ 97/2026ರಲ್ಲಿ ಬಂಧಿತರಾಗಿರುವ ಪುತ್ತೂರು ಕಸಬಾದ ನಿವಾಸಿ ಸುದರ್ಶನ್ ಪೈ (29) ವಿರುದ್ಧ ಈ ಹಿಂದೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯ ಸೆಕ್ಷನ್ 8(C) ಅಡಿಯಲ್ಲಿ ಪ್ರಕರಣ ಸಂಖ್ಯೆ 182/2025 ದಾಖಲಾಗಿತ್ತು. ಅಲ್ಲದೆ, ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 307 ಮತ್ತು 504 ಹಾಗೂ 34ರ ಅಡಿಯಲ್ಲಿ ಪ್ರಕರಣ ಸಂಖ್ಯೆ 87/2021 ಕೂಡ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದ ವೇಳೆ ಸುದರ್ಶನ್ ಪೈ ಅವರ ತಂದೆ ಸದಾಶಿವ ಪೈ ಸ್ಥಳದಲ್ಲಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಗಲಾಟೆ ಆರಂಭವಾದ ಬಳಿಕ ಅವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಅಂಗಡಿ ಮಾಲೀಕರ ದೂರಿನ ಆಧಾರದ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಪುತ್ತೂರು ಕಸಬಾದ ನಿವಾಸಿ ಅಂಜನಾ ಎಸ್. ಪೈ (50) ನೀಡಿದ ದೂರಿನ ಪ್ರಕಾರ, ಅವರು ದರ್ಬೆಯಲ್ಲಿ ಡ್ರೀಮ್ ಡೆಸ್ಟಿನೇಷನ್ ಎಂಬ ಜನಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ. ಆಗಸ್ಟ್ 21ರಂದು ಮಧ್ಯಾಹ್ನ ಮಹಿಳೆಯೊಬ್ಬರು ಲ್ಯಾಮಿನೇಷನ್‌ಗೆ ನೀಡಿದ್ದ ದಾಖಲೆಯು ತಾಂತ್ರಿಕ ದೋಷದಿಂದ ಹಾನಿಗೊಳಗಾಗಿದೆ. ಸಂಜೆ ಅಂಗಡಿ ಸಿಬ್ಬಂದಿ, ದಾಖಲೆ ನೀಡಿದ್ದ ಮಹಿಳೆ ಗಲಾಟೆ ಮಾಡುತ್ತಿದ್ದಾರೆ ಎಂದು ದೂರುದಾರರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ಅಂಗಡಿಗೆ ತೆರಳಿದ್ದಾರೆ.ಸ್ಥಳದಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಗಲಾಟೆ ಮಾಡುತ್ತಿದ್ದು, ದಾಖಲೆಗಳನ್ನು ನೀಡಬೇಕು ಅಥವಾ 10,000 ರೂ. ಪಾವತಿಸಬೇಕು ಎಂದು ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರುದಾರರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದಾಗ, ಅವರು ವಿಡಿಯೋ ಚಿತ್ರೀಕರಿಸಲು ಮುಂದಾಗಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಹಾಗೂ ಮತ್ತೋರ್ವ ಆರೋಪಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.ಈ ದೂರಿನ ಆಧಾರದ ಮೇಲೆ ಫಾತಿಮತ್ ಮಿಸ್ವಾನಾ, ಮುಬಶಿರಾ, ಮುಬಾರಿಶ್ ಮತ್ತು ನೌಶಾದ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 98/2026 ದಾಖಲಾಗಿದೆ. BNS 2023ರ ಸೆಕ್ಷನ್ 115(2), 352, 351(2), 79 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.ಇನ್ನು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಇನ್ನೊಂದು ಪ್ರಕರಣ ದಾಖಲಾಗಿದೆ. ಆಗಸ್ಟ್ 21ರ ಸಂಜೆ ದರ್ಬೆ ಜಂಕ್ಷನ್ ಸಮೀಪದ ಡ್ರೀಮ್ ಡೆಸ್ಟಿನೇಷನ್ ಜನಸೇವಾ ಕೇಂದ್ರದ ಎದುರು ಸಾರ್ವಜನಿಕರು ಗಲಾಟೆಯಲ್ಲಿ ತೊಡಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜಾ ಅವರಿಗೆ ಮಾಹಿತಿ ಲಭಿಸಿತು.ಅವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದಾಗ, ಅಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿರುವುದು ಕಂಡುಬಂದಿದೆ. ಜನರನ್ನು ಚದುರಿಸುವ ಸಂದರ್ಭದಲ್ಲಿ ಕೆಲವರು ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.ಗಲಾಟೆಯಲ್ಲಿ ಭಾಗಿಯಾಗಿದ್ದ ಕೆಲವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ನಿಯಾಜ್, ನೌಶಾದ್ ಹಾಗೂ ಇತರರು ಪೊಲೀಸರನ್ನು ತಡೆದು ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ದೂರಲಾಗಿದೆ.ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 99/2026 ದಾಖಲಿಸಲಾಗಿದ್ದು, BNS 2023ರ ಸೆಕ್ಷನ್ 132, 121(1) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆಯೂ ಮುಂದುವರಿದಿದೆ.ಘಟನೆಯ ವೇಳೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳದಿಂದ ತೆರಳುವಂತೆ ಪೊಲೀಸರು ಸೂಚನೆ ನೀಡಿದರೂ, ಕೆಲವರು ಸ್ಥಳದಿಂದ ತೆರಳದ ಹಿನ್ನೆಲೆಯಲ್ಲಿ ಜನರನ್ನು ಚದುರಿಸಲು ಪೊಲೀಸರು ಲಘು ಪ್ರಮಾಣದ ಲಾಠಿ ಪ್ರಹಾರ ನಡೆಸಿದರು.

About The Author

Leave a Reply