August 25, 2026
WhatsApp Image 2026-08-25 at 12.16.53 PM

ಹಿಜಾಬ್ (ಶಿರವಸ್ತ್ರ) ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಅಥವಾ ಕಡ್ಡಾಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಸೂಕ್ತ ಆಧಾರಗಳಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಶಾಲೆಯ ನಿಗದಿತ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಮುಸ್ಲಿಂ ಬಾಲಕಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ಜೆ.ಜೆ. ಮುನಿರ್ ಹಾಗೂ ನ್ಯಾಯಮೂರ್ತಿ ಇಂದ್ರಜೀತ್ ಶುಕ್ಲಾ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿದೆ.

ಪ್ರಯಾಗ್‌ರಾಜ್‌ನ ಟಾಗೋರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸುಕೈನಾ ರಿಜ್ವಿ ಎಂಬುವರು 11 ನೇ ತರಗತಿ ಪ್ರವೇಶಾತಿ ವೇಳೆ ಶಾಲಾ ಸಮವಸ್ತ್ರದ ಜೊತೆಗೆ ಶಿರೋವಸ್ತ್ರ ಧರಿಸಲು ಅನುಮತಿ ನೀಡಬೇಕೆಂದು ತಾಯಿಯ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. 6 ರಿಂದ 10 ನೇ ತರಗತಿಯವರೆಗೆ ತಮಗೆ ಹಿಜಾಬ್ ಧರಿಸಲು ಶಾಲೆಯಲ್ಲಿ ಅವಕಾಶ ನೀಡಲಾಗಿತ್ತು ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಸಮವಸ್ತ್ರ ಮತ್ತು ಶಾಲಾ ಶಿಸ್ತು: ಶಾಲೆಯು ನಿಗದಿಪಡಿಸಿದ ಸಮವಸ್ತ್ರ ನೀತಿಯು ನ್ಯಾಯಸಮ್ಮತ, ತಾರತಮ್ಯರಹಿತ ಹಾಗೂ ಶೈಕ್ಷಣಿಕ ಶಿಸ್ತು ಮತ್ತು ಸಮಾನತೆಯನ್ನು ಕಾಯ್ದುಕೊಳ್ಳುವ ಉದ್ದೇಶ ಹೊಂದಿದ್ದಾಗ, ಅದರಲ್ಲೇ ಬದಲಾವಣೆ ಮಾಡುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿಯಲಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ: ಸಂವಿಧಾನದ ವಿಧಿ 25 ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ ಪಡೆಯಲು, ಹಿಜಾಬ್ ಧರಿಸುವುದು ಧರ್ಮದ ಕಡ್ಡಾಯ ಆಚರಣೆ ಎಂಬುದನ್ನು ಸಾಬೀತುಪಡಿಸುವ ಕಾನೂನಾತ್ಮಕ ಹಾಗೂ ಧಾರ್ಮಿಕ ಆಧಾರಗಳನ್ನು ಅರ್ಜಿದಾರರು ಒದಗಿಸಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಹೈಕೋರ್ಟ್ ತೀರ್ಪಿನ ಉಲ್ಲೇಖ: 2022ರಲ್ಲಿ ಕರ್ನಾಟಕ ಹೈಕೋರ್ಟ್‌ನ ಪೂರ್ಣಪೀಠವು ನೀಡಿದ್ದ “ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ” ಎಂಬ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಉಲ್ಲೇಖಿಸಿದ್ದು, ಆ ಅಭಿಪ್ರಾಯದಿಂದ ಭಿನ್ನವಾಗಿ ನೋಡಲು ಯಾವುದೇ ಕಾರಣವಿಲ್ಲ ಎಂದು ತಿಳಿಸಿದೆ.

ವೈಯಕ್ತಿಕ ಕಾರಣಗಳಿಗಾಗಿ ಸಮವಸ್ತ್ರ ನಿಯಮದಲ್ಲಿ ವಿನಾಯಿತಿ ನೀಡುತ್ತಾ ಹೋದರೆ ಅದು ಶಾಲೆಯ ಶಿಸ್ತು ಹಾಗೂ ‘ಸಮವಸ್ತ್ರ’ದ ಮೂಲ ಪರಿಕಲ್ಪನೆಗೆ ಧಕ್ಕೆ ತರುತ್ತದೆ ಎಂದು ಹೇಳಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.

About The Author

Leave a Reply