September 19, 2026
WhatsApp Image 2026-09-15 at 9.43.08 AM

ಮಂಗಳೂರು: ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತುಳುನಾಡಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ತಿಳಿಸಿದ್ದಾರೆ.

ತುಳು ಕೇವಲ ಒಂದು ಭಾಷೆಯಲ್ಲ. ಅದು ತುಳುನಾಡಿನ ಜನರ ಅಸ್ಮಿತೆ, ಆತ್ಮಗೌರವ, ಸಂಸ್ಕೃತಿ, ಪರಂಪರೆ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ಶತಮಾನಗಳಿಂದ ಜನರ ನಿತ್ಯ ಜೀವನದಲ್ಲಿ ಜೀವಂತವಾಗಿರುವ ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆಯಬೇಕು ಎಂಬುದು ತುಳುವರ ಬಹುಕಾಲದ ಕನಸಾಗಿತ್ತು. ಇದೀಗ ಆ ಕನಸಿಗೆ ಸರ್ಕಾರದ ನಿರ್ಧಾರದ ಮೂಲಕ ಮಹತ್ವದ ಸ್ಪಂದನೆ ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ವಿವಿಧ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಭಾಷಾ ಹೋರಾಟಗಾರರು ಹಾಗೂ ದೇಶ-ವಿದೇಶಗಳಲ್ಲಿ ನೆಲೆಸಿರುವ ತುಳುವರು ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ, ಮನವಿ, ಜಾಗೃತಿ ಮತ್ತು ಅಭಿಯಾನಗಳನ್ನು ನಡೆಸಿಕೊಂಡು ಬಂದಿದ್ದಾರೆ. ಈ ದೀರ್ಘಕಾಲದ ಹೋರಾಟ ಮತ್ತು ಪ್ರಯತ್ನಗಳಿಗೆ ಸರ್ಕಾರದ ನಿರ್ಧಾರವು ಗೌರವ ನೀಡಿದಂತಾಗಿದೆ ಎಂದು ಯೋಗಿಶ್ ಶೆಟ್ಟಿ ಜಪ್ಪು ಅಭಿಪ್ರಾಯಪಟ್ಟಿದ್ದಾರೆ.

ಕರಾವಳಿಯ ಭಾಷಾ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯ ಮಹತ್ವವನ್ನು ಪರಿಗಣಿಸಿ ಅಧಿಕೃತ ಮಾನ್ಯತೆ ನೀಡುವ ನಿರ್ಧಾರ ಕೈಗೊಂಡಿರುವುದು ಕರಾವಳಿ ಕರ್ನಾಟಕದ ಭಾಷಾ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

“ಭರವಸೆ ಬೇಡ, ನಿರ್ಧಾರ ಬೇಕು” ಎಂಬ ಆಶಯದೊಂದಿಗೆ ತುಳುವರು ಹಲವು ವರ್ಷಗಳಿಂದ ಕಾಯುತ್ತಿದ್ದರು. ಇದೀಗ ಸರ್ಕಾರದ ನಿರ್ಧಾರ ಆ ನಿರೀಕ್ಷೆಗೆ ಸ್ಪಂದಿಸಿರುವುದರಿಂದ ತುಳುನಾಡಿನ ಜನರಲ್ಲಿ ಸಂತಸ, ಹೆಮ್ಮೆ ಮತ್ತು ಹೊಸ ಭರವಸೆ ಮೂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಐತಿಹಾಸಿಕ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ, ಸಚಿವ ಸಂಪುಟದ ಎಲ್ಲಾ ಸಚಿವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ತುಳು ಭಾಷೆಯ ಬೇಡಿಕೆಗೆ ಸ್ಪಂದಿಸಿದ ಪ್ರತಿಯೊಬ್ಬರಿಗೂ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಕರಾವಳಿಯ ಜನರನ್ನು ತುಳು ಭಾಷೆಯಲ್ಲಿ “ಮಾತೆರೆಗ್ಲಾ ಸೊಲ್ಮೆಲು” ಎಂದು ಅಭಿನಂದಿಸಿರುವುದು ಕೂಡ ತುಳು ಭಾಷೆಯ ಮೇಲಿನ ಗೌರವ ಮತ್ತು ಅಭಿಮಾನವನ್ನು ಪ್ರತಿಬಿಂಬಿಸುತ್ತದೆ ಎಂದು ಯೋಗಿಶ್ ಶೆಟ್ಟಿ ಜಪ್ಪು ತಿಳಿಸಿದ್ದಾರೆ.

ಅಧಿಕೃತ ಮಾನ್ಯತೆ ಹೊಸ ಅಧ್ಯಾಯದ ಆರಂಭವಾಗಲಿ

ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆತಿರುವುದು ಅಂತಿಮ ಗುರಿಯಲ್ಲ. ಬದಲಾಗಿ, ತುಳು ಭಾಷೆಯ ಸಮಗ್ರ ಅಭಿವೃದ್ಧಿ ಮತ್ತು ಮುಂದಿನ ಪೀಳಿಗೆಗೆ ಅದರ ಬಲಿಷ್ಠ ವರ್ಗಾವಣೆಗೆ ಇದು ಹೊಸ ಅಧ್ಯಾಯದ ಆರಂಭವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ ಹಂತದಲ್ಲಿ:

  • ಸರ್ಕಾರಿ ಕಚೇರಿಗಳಲ್ಲಿ ತುಳು ಭಾಷೆಯ ಬಳಕೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು;
  • ತುಳು ಮಾಧ್ಯಮ ಹಾಗೂ ತುಳು ಭಾಷೆಯ ಮೂಲಕ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು;
  • ತುಳು ಭಾಷಾ ಅಭಿವೃದ್ಧಿ ನಿಗಮ ಹಾಗೂ ತುಳು ಭವನ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು;
  • ತುಳು ಸಾಹಿತ್ಯ, ಕಲೆ, ಯಕ್ಷಗಾನ, ದೈವಾರಾಧನೆ ಹಾಗೂ ಜನಪದ ಪರಂಪರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು;
  • ತುಳು ಭಾಷೆಯನ್ನು ಭಾರತ ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು;
  • ತುಳು ಭಾಷೆಯ ಸಂಶೋಧನೆ, ಡಿಜಿಟಲೀಕರಣ, ದಾಖಲೀಕರಣ ಹಾಗೂ ವಿಶ್ವವಿದ್ಯಾಲಯ ಮಟ್ಟದ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.

ಇಂತಹ ಕ್ರಮಗಳ ಮೂಲಕ ತುಳು ಭಾಷೆಯ ಬೆಳವಣಿಗೆಗೆ ಮತ್ತಷ್ಟು ಬಲ ದೊರೆಯಲಿದ್ದು, ಮುಂದಿನ ಪೀಳಿಗೆಗೂ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿ ತಲುಪಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

“ತುಳು ನಮ್ಮ ಭಾಷೆ ಮಾತ್ರವಲ್ಲ; ಅದು ನಮ್ಮ ಅಸ್ಮಿತೆ. ತುಳು ಭಾಷೆಯ ಗೌರವವನ್ನು ಕಾಪಾಡುವುದು ಮತ್ತು ಅದರ ಅಭಿವೃದ್ಧಿಗೆ ಕೈಜೋಡಿಸುವುದು ನಮ್ಮೆಲ್ಲರ ಜವಾಬ್ದಾರಿ. ತುಳುವರ ಬಹುಕಾಲದ ಆಶಯಕ್ಕೆ ಸ್ಪಂದಿಸಿ ಐತಿಹಾಸಿಕ ನಿರ್ಧಾರ ಕೈಗೊಂಡ ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.” ಎಂದು ಯೋಗಿಶ್ ಶೆಟ್ಟಿ ಜಪ್ಪು ತಿಳಿಸಿದ್ದಾರೆ

About The Author

Leave a Reply