

ಮಂಗಳೂರು: ಶಿಥಿಲಗೊಂಡ ಕಟ್ಟಡಗಳ ಸುರಕ್ಷತಾ ಪರಿಶೀಲನೆ ಹಾಗೂ ಕಟ್ಟಡ ಪರವಾನಗಿ ನವೀಕರಣ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಲಾಯಿತು.
ಇತ್ತೀಚೆಗೆ ಮಂಗಳೂರಿನಲ್ಲಿ ಶಿಥಿಲಗೊಂಡ ಕಟ್ಟಡದಿಂದ ವಿದ್ಯಾರ್ಥಿಯೊಬ್ಬರು ದುರ್ಮರಣಕ್ಕೀಡಾದ ಘಟನೆ ಅತ್ಯಂತ ದುಃಖಕರವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ನಗರದಲ್ಲಿರುವ ಶಿಥಿಲಗೊಂಡ ಕಟ್ಟಡಗಳ ಸುರಕ್ಷತೆಯ ಬಗ್ಗೆ ತಕ್ಷಣ ಗಮನ ಹರಿಸುವುದು ಅಗತ್ಯವಾಗಿದೆ.
ಆದ್ದರಿಂದ ಮಂಗಳೂರು ನಗರದಲ್ಲಿರುವ ಎಲ್ಲಾ ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳನ್ನು ತಜ್ಞರ ಮೂಲಕ ಪರಿಶೀಲಿಸಿ, ಅಪಾಯಕಾರಿಯಾಗಿರುವ ಕಟ್ಟಡಗಳನ್ನು ಗುರುತಿಸಬೇಕು. ಅಂತಹ ಕಟ್ಟಡಗಳ ಮಾಲೀಕರಿಗೆ ಅಗತ್ಯ ಸೂಚನೆ ನೀಡಿ, ಕಟ್ಟಡವನ್ನು ದುರಸ್ತಿ ಮಾಡಿಸುವ ಅಥವಾ ನಿಯಮಾನುಸಾರ ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು.
ಅಲ್ಲದೆ, ಕಟ್ಟಡ ಪರವಾನಗಿಯನ್ನು ನವೀಕರಿಸುವ ಸಂದರ್ಭದಲ್ಲಿ ಕಟ್ಟಡದ ಸ್ಥಿರತೆ ಮತ್ತು ಸುರಕ್ಷತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಶಾಲಾ-ಕಾಲೇಜುಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶಗಳಲ್ಲಿರುವ ಅಪಾಯಕಾರಿ ಕಟ್ಟಡಗಳ ಸುತ್ತ ಸುರಕ್ಷತಾ ತಡೆಗೋಡೆ ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಅಲ್ಲದೇ ಮಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸಿ ಕಟ್ಟಡದ ಪರವಾನಿಗೆ ರದ್ದುಪಡಿಸಿ ಕಾನೂನು ನಿಯಮನುಸಾರ ಕಟ್ಟಡ ತೆರವಿಗೆ ಆದೇಶಿಸಬೇಕು.
ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಸಂಭವಿಸದಂತೆ ನಿಯಮಿತ ಸುರಕ್ಷತಾ ಪರಿಶೀಲನೆ ನಡೆಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ನೀಡಲಾಯಿತು.
ಈ ಸಂಧರ್ಭದಲ್ಲಿ ಯಂಗ್ ಡೆಮಾಕ್ರಟ್ಸ್ ಮಂಗಳೂರು ನಗರ ಜಿಲ್ಲಾ ಕನ್ವೀನರ್ ಇರ್ಫಾನ್ ತುಂಬೆ, ಜಾಯಿಂಟ್ ಕನ್ವೀನರ್ ಗಳಾದ ತನ್ವೀರ್ ಉಳ್ಳಾಲ, ಶರ್ಫುದ್ಧಿನ್ ಬಜ್ಪೆ ಹಾಗೂ , ಜಿಲ್ಲಾ ಸಮಿತಿ ಸದಸ್ಯರಾದ ಹಮೀದ್, ಅನ್ಸಾರ್ ಕುದ್ರೋಳಿ ಉಪಸ್ಥಿತರಿದ್ದರು






