October 1, 2026
WhatsApp Image 2026-10-01 at 12.54.42 PM

ಪಾಲಕ್ಕಾಡ್ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿರುವುದಾಗಿ ತಾಯಿ ನಿವೇದ್ಯ ಪೊಲೀಸರ ಮುಂದೆ ಒಪ್ಪಿಕೊಂಡಿರುವ ಘಟನೆ ಪಾಲಕ್ಕಾಡ್‌ನಲ್ಲಿ ನಡೆದಿದೆ. ಮೃತ ಮಕ್ಕಳನ್ನು ಜಾನ್ ಕುಮಾರ್ ಮತ್ತು ನಿವೇದ್ಯ ದಂಪತಿಯ ಮಕ್ಕಳಾದ ಜೆನ್ನಿಫರ್ ಜೂಲಿಯೆಟ್ (5) ಹಾಗೂ ರಾಬಿನ್ ಕ್ರಿಸ್ಟೋಫರ್ (3) ಎಂದು ಗುರುತಿಸಲಾಗಿದೆ.

ಪೊಲೀಸರ ವಿಚಾರಣೆಯಲ್ಲಿ ನಿವೇದ್ಯ, ಮಕ್ಕಳ ಉಪಸ್ಥಿತಿ ತನ್ನ ಸ್ವತಂತ್ರ ಜೀವನ ಹಾಗೂ ಮಾಡೆಲಿಂಗ್ ಕ್ಷೇತ್ರಕ್ಕೆ ತೆರಳುವ ಆಸೆಗೆ ಅಡ್ಡಿಯಾಗುತ್ತಿದೆ ಎಂಬ ಕಾರಣದಿಂದ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾಳೆ ಎನ್ನಲಾಗಿದೆ. ತಾನು ಕೂಡ ಕಲಿಯುವ ಆಸೆ ಹೊಂದಿದ್ದರೂ ಮಕ್ಕಳ ಆರೈಕೆಯಿಂದಾಗಿ ಸಾಧ್ಯವಾಗುತ್ತಿರಲಿಲ್ಲ ಎಂದು ಆಕೆ ತಿಳಿಸಿದ್ದಾಳೆ.

ಘಟನೆ ನಡೆದ ವೇಳೆ ಮನೆಯಲ್ಲಿ ನಿವೇದ್ಯ ಮತ್ತು ಇಬ್ಬರು ಮಕ್ಕಳು ಮಾತ್ರ ಇದ್ದರು ಎನ್ನಲಾಗಿದೆ. ಮನೆಯ ಮುಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಲವು ದಿನಗಳಿಂದ ಮಕ್ಕಳ ಧ್ವನಿ ಕೇಳಿಸಿರಲಿಲ್ಲ. ಅನುಮಾನಗೊಂಡ ಅವರು ಸಮೀಪದ ಮನೆಗಳ ಬಳಿ ವಿಚಾರಿಸಿದರೂ ಮಕ್ಕಳ ಸುಳಿವು ಸಿಗಲಿಲ್ಲ. ಬಳಿಕ ಹಿಂಭಾಗದ ಸ್ವಾನಗೃಹದಲ್ಲಿ ಪರಿಶೀಲಿಸಿದಾಗ ಇಬ್ಬರೂ ಮಕ್ಕಳು ನೀರಿನ ಟಬ್‌ನಲ್ಲಿ ನಿಶ್ಚಲವಾಗಿ ಬಿದ್ದಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

ಆರಂಭದಲ್ಲಿ ಮಕ್ಕಳು ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ನಿವೇದ್ಯ ಅವರ ತಾಯಿ ಹೇಳಿಕೆ ನೀಡಿದ್ದರು. ಆದರೆ ತನಿಖೆ ಮುಂದುವರಿದಂತೆ ನಿವೇದ್ಯ ಪೊಲೀಸರ ಮುಂದೆ ಮಕ್ಕಳನ್ನು ತಾನೇ ಮುಳುಗಿಸಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ತನ್ನ ಪತಿ ಹಾಗೂ ಮಕ್ಕಳ ಕುರಿತು ಕೆಲವರು ವದಂತಿಗಳನ್ನು ಹರಡುತ್ತಿದ್ದರು ಮತ್ತು ಮಕ್ಕಳು ತನ್ನವರಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು ಎಂದು ನಿವೇದ್ಯ ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ. ಮಕ್ಕಳನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ಆಕೆ ಹೇಳಿದ್ದಾಳೆ.

ಇತ್ತ, ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಿವೇದ್ಯ ಅತಿಯಾಗಿ ಮೊಬೈಲ್ ಬಳಸುತ್ತಿದ್ದುದಕ್ಕೆ ಜಾನ್ ಕುಮಾರ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಘಟನೆಗೆ ಇನ್ನೂ ಬೇರೆ ಯಾವುದೇ ಕಾರಣಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ನಿವೇದ್ಯ ಅವರ ಮೊಬೈಲ್ ಫೋನ್ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.

About The Author

Leave a Reply