

ಸಾಲೆತ್ತೂರು: ಮೈದಾನದ ಪೇಟೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಿಸಲಾಗುತ್ತಿರುವ ರಿಕ್ಷಾ ನಿಲ್ದಾಣದ ಕಾಮಗಾರಿ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪಿಡಬ್ಲ್ಯೂಡಿ ರಸ್ತೆಯ ಮಾರ್ಜಿನ್ನಲ್ಲಿ, ಅಪಘಾತದ ಅಪಾಯವಿರುವ ಪ್ರದೇಶದಲ್ಲಿ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ನಿರ್ಮಾಣ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ರಿಕ್ಷಾ ಚಾಲಕರ ಜೀವನೋಪಾಯದ ದೃಷ್ಟಿಯಿಂದ ಮಾನವೀಯ ನೆಲೆಯಲ್ಲಿ ಆರಂಭದಲ್ಲಿ ಮೌನವಾಗಿದ್ದರೂ, ಕಾಮಗಾರಿಯ ಸ್ಥಳ ಮತ್ತು ನಿಯಮಬದ್ಧತೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಬೇಕಿತ್ತು. ಕಾಮಗಾರಿ ಆರಂಭಕ್ಕೂ ಮುನ್ನವೇ ಪಿಡಬ್ಲ್ಯೂಡಿ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಗ್ರಾಮ ಪಂಚಾಯತ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಂಗ್ರೇಸ್ ಪಕ್ಷ ದೂರು ಸಲ್ಲಿಸಿರುತ್ತಿದ್ದರೆ ನಿಯಮಬಾಹಿರ ಕಾಮಗಾರಿ ನಡೆಯುವುದನ್ನು ನಿಲ್ಲಿಸಬಹುದಿತ್ತು.ಆದರೆ ರಿಕ್ಷಾ ಚಾಲಕರಿಗೆ ತೊಂದರೆಯಾಗಬಾರದೆಂಬ ದೃಷ್ಠಿಯಲ್ಲಿ ಕೈ ಬಿಡಲಾಗಿತ್ತು.
ಇನ್ನೊಂದೆಡೆ, ನಿರ್ಮಾಣದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮನ ಗೆಲ್ಲುವ ಉದ್ದೇಶದಿಂದ ಬಿಜೆಪಿಯವರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಫೋಟೋ ಅಳವಡಿಸಿ, ಕಾಮಗಾರಿ ಪೂರ್ಣಗೊಂಡ ಬಳಿಕ ಅದನ್ನು ತೆಗೆದು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದರ ಫೋಟೋಗಳನ್ನು ಅಳವಡಿಸಿರುವುದು ರಾಜಕೀಯ ಉದ್ದೇಶದಿಂದ ಕೂಡಿದೆ ಎಂಬ ಟೀಕೆ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪ್ರದೇಶಾಭಿವೃದ್ದಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ರಿಕ್ಷಾ ನಿಲ್ದಾಣಕ್ಕೆ ಕೇಂದ್ರ ಸರ್ಕಾರದ ಅನುದಾನದ ನಯಾಪೈಸೆಯ ಪಾಲು ಇಲ್ಲದಿದ್ದರೂ, ಪ್ರಧಾನಿ ಹಾಗೂ ಸಂಸದರ ಫೋಟೋಗಳನ್ನು ಅಳವಡಿಸಿರುವುದು ಹಾಸ್ಯಸ್ಪದವಾಗಿದೆ.
ಈ ಕಾಮಗಾರಿಯ ನಿಯಮಬದ್ಧತೆ, ರಸ್ತೆ ಸುರಕ್ಷತೆ ಹಾಗೂ ಅನುದಾನದ ಬಳಕೆಯ ಕುರಿತು ಕೊಳ್ನಾಡು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ಪಿಡಬ್ಲ್ಯೂಡಿ ಹಾಗೂ ಸಂಬಂಧಪಟ್ಟ ಇಂಜಿನಿಯರಿಂಗ್ ಇಲಾಖೆಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ.






