

ಮೂಡುಬಿದಿರೆ : ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಶಾಕ್ ತಗುಲಿ ತಾಯಿ ಹಾಗೂ ಮಗ ಇಬ್ಬರೂ ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಮರ್ಸಿ ಮಸ್ಕರೇನಸ್ (45) ಹಾಗೂ ಅವರ ಪುತ್ರ ಶೋನ್ ಮಸ್ಕರೇನಸ್ (18) ಮೃತಪಟ್ಟ ದುರ್ದೈವಿಗಳು. ವಿದ್ಯುತ್ ಆಘಾತಕ್ಕೊಳಗಾದ ಮಗನನ್ನು ರಕ್ಷಿಸಲು ಹೋದಾಗ ತಾಯಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೂಡುಬಿದಿರೆಯ ಹೋಲಿ ರೋಸರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ಶೋನ್ ಮಸ್ಕರೇನಸ್, ಬೆಳಗಿನ ಜಾವ ಮನೆಯ ಹೊರಗಡೆ ಬಟ್ಟೆ ಒಣಗಿಸಲು ತೆರಳಿದ್ದಾಗ ಈ ಆಕಸ್ಮಿಕ ಅವಘಡ ಸಂಭವಿಸಿದೆ. ಬಟ್ಟೆ ಒಣಗಿಸಲು ಹಾಕಲಾಗಿದ್ದ ಕಬ್ಬಿಣದ ತಂತಿಗೆ ಹೈಟೆನ್ಶನ್ ವಿದ್ಯುತ್ ತಂತಿಯ ಸಂಪರ್ಕ ಉಂಟಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿದೆ. ಮಗ ವಿದ್ಯುತ್ ಆಘಾತದಿಂದ ಒದ್ದಾಡುವುದನ್ನು ಕಂಡು ಆತನನ್ನು ಪಾರು ಮಾಡಲು ಓಡೋಡಿ ಬಂದ ತಾಯಿ ಮರ್ಸಿ ಮಸ್ಕರೇನಸ್ ಅವರಿಗೂ ಹೈಟೆನ್ಷನ್ ವಿದ್ಯುತ್ ಸ್ಪರ್ಶಿಸಿದೆ.
ಬೆಳಿಗ್ಗೆ ಸುಮಾರು 7ರಿಂದ 8 ಗಂಟೆಯ ವೇಳೆಗೆ ಮನೆಗೆ ತೋಟದ ಕೆಲಸಕ್ಕಾಗಿ ಬಂದ ಕಾರ್ಮಿಕರೊಬ್ಬರು ತಾಯಿ-ಮಗ ಇಬ್ಬರೂ ರಕ್ತಸ್ರಾವ ಹಾಗೂ ಸುಟ್ಟ ಗಾಯಗಳೊಂದಿಗೆ ಬಿದ್ದಿರುವುದನ್ನು ಗಮನಿಸಿ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮೂಡುಬಿದಿರೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







