October 23, 2026
WhatsApp Image 2026-10-22 at 8.51.20 PM


ಮಂಗಳೂರು: ಮಾನವೀಯ ಸೇವೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಟೀಮ್ ಬೀ-ಹೂಮನ್ ಸಂಸ್ಥೆಯು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದು ಸಂಸ್ಥೆಯ ಪ್ರಮುಖ ಧೈಯವಾಗಿದೆ.


ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ನಿರಂತರ ಡಯಾಲಿಸಿಸ್ ಚಿಕಿತ್ಸೆ ಅತ್ಯಗತ್ಯವಾಗಿದೆ. ಆದರೆ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇಂತಹ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಬೀ-ಹೂಮನ್ ಸಂಸ್ಥೆಯು ಡಯಾಲಿಸಿಸ್ ಚಿಕಿತ್ಸೆಗೆ ಆರ್ಥಿಕ ಸಹಾಯ ಒದಗಿಸುತ್ತಿದೆ.


ಪ್ರಸ್ತುತ ಸಂಸ್ಥೆಯು 85 ಡಯಾಲಿಸಿಸ್ ರೋಗಿಗಳಿಗೆ ನೆರವು ನೀಡುತ್ತಿದ್ದು, ಪ್ರತಿ ತಿಂಗಳು ಸುಮಾರು 1,020 ಡಯಾಲಿಸಿಸ್ ಸೆಷನ್‌ಗಳಿಗೆ Rs.10.20 ಲಕ್ಷ ವೆಚ್ಚ ಮಾಡುತ್ತಿದೆ. ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಿ ಹೆಚ್ಚುವರಿಯಾಗಿ 55 ರೋಗಿಗಳಿಗೆ ನೆರವು ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಇದಕ್ಕಾಗಿ ಪ್ರತಿ ತಿಂಗಳು ಅಂದಾಜು Rs.6.60 ಲಕ್ಷ ಹಾಗೂ ವರ್ಷಕ್ಕೆ Rs.79.20 ಲಕ್ಷ ಅಗತ್ಯವಿದೆ. ಈ ಗುರಿ ಸಾಧನೆಯಾದಲ್ಲಿ ಒಟ್ಟು 140 ರೋಗಿಗಳಿಗೆ ನೆರವು ನೀಡಲು ಸಾಧ್ಯವಾಗಲಿದೆ.


ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಅಗತ್ಯ ನಿಧಿ ಸಂಗ್ರಹಿಸುವ ಉದ್ದೇಶದಿಂದ ಹೂಮ್ಯಾನಿಟಿ ಕಪ್ 2026 ಕ್ರಿಕೆಟ್ ಪಂದ್ಯಾವಳಿಯನ್ನು ನವೆಂಬರ್ 20ರಿಂದ 26ರವರೆಗೆ ಮಂಗಳೂರಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿಯು ಕೇವಲ ಕ್ರೀಡಾಕೂಟವಾಗಿರದೆ, ಮಾನವೀಯತೆ, ಒಗ್ಗಟ್ಟು, ಸಹಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶ ಸಾರುವ ಒಂದು ವಿಶಿಷ್ಟ ಪ್ರಯತ್ನವಾಗಿದೆ. ಕ್ರಿಕೆಟ್ ಮೂಲಕ ಜನರನ್ನು ಒಂದೆಡೆ ಸೇರಿಸಿ, ಸಂಕಷ್ಟದಲ್ಲಿರುವ ಡಯಾಲಿಸಿಸ್ ರೋಗಿಗಳಿಗೆ ನೆರವು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪಂದ್ಯಾವಳಿಯ ಮೂಲಕ ಸಂಗ್ರಹವಾಗುವ ದೇಣಿಗೆ ಮತ್ತು ಪ್ರಾಯೋಜಕತ್ವದ ಮೊತ್ತವನ್ನು ಹೆಚ್ಚುವರಿ 55 ರೋಗಿಗಳಿಗೆ ಆರ್ಥಿಕ ನೆರವು ನೀಡಲು ಬಳಸುವ ಗುರಿಯನ್ನು ಸಂಸ್ಥೆ ಹೊಂದಿದೆ.


ಧರ್ಮ, ಜಾತಿ, ಭಾಷೆ ಮತ್ತು ಸಮುದಾಯದ ಭಿನ್ನತೆಗಳನ್ನು ಮೀರಿ ಮಾನವೀಯತೆಯ ಆಧಾರದ ಮೇಲೆ ಎಲ್ಲರೂ ಒಂದಾಗಬೇಕು ಎಂಬ ನಂದೇಶವನ್ನು ಈ ಪಂದ್ಯಾವಳಿ ಸಾರಲಿದೆ. ಕ್ರೀಡೆಯ ಮೂಲಕ ಮಾನವೀಯ ಸೇವೆಗೆ ಪ್ರೇರಣೆ ನೀಡುವ ಈ ಕಾರ್ಯಕ್ಕೆ ಸಾರ್ವಜನಿಕರು, ದಾನಿಗಳು, ಉದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಕ್ರೀಡಾಭಿಮಾನಿಗಳು ಉದಾರವಾಗಿ ಸಹಕರಿಸುವಂತೆ ಟೀಮ್ ಬೀ-ಹೂಮನ್ ಮನವಿ ಮಾಡಿದೆ.
ಟೀಮ್ ಬೀ-ಹೂಮನ್ | ಹೂಮ್ಯಾನಿಟಿ ಕಪ್ 2026
ಕ್ರೀಡೆಯ ಮೂಲಕ ಮಾನವೀಯತೆ – ಸೇವೆಯ ಮೂಲಕ ಬದುಕಿಗೆ ಭರವಸೆ.

About The Author

Leave a Reply