

ಏರ್ಟೆಲ್ ನೆಟ್ವರ್ಕ್ಗಾಗಿ ಗ್ರಾಮಸ್ಥರ ಪರದಾಟ — ದೂರು ನೀಡಿದರೂ ಪ್ರಯೋಜನವಿಲ್ಲ!
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮಸ್ಥರು ಕಳೆದ ಕೆಲವು ತಿಂಗಳುಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಮುಖವಾಗಿ ಏರ್ಟೆಲ್ (Airtel) ಮೊಬೈಲ್ ನೆಟ್ವರ್ಕ್ ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಜನರು ಕರೆ ಮಾಡಲು ಹಾಗೂ ಅಗತ್ಯ ಸಂವಹನ ನಡೆಸಲು ಪರದಾಡುವಂತಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ನೆಟ್ವರ್ಕ್ ಎನ್ನುವುದು ಕೇವಲ ಸಂಪರ್ಕದ ಸಾಧನವಲ್ಲ, ಜನಜೀವನದ ಅತ್ಯಗತ್ಯ ಭಾಗವಾಗಿದೆ. ತುರ್ತು ಸಂದರ್ಭಗಳಲ್ಲಿ ಕರೆ ಮಾಡುವುದು, ಆನ್ಲೈನ್ ಸೇವೆಗಳನ್ನು ಬಳಸುವುದು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಉದ್ಯೋಗ ಸಂಬಂಧಿತ ಕೆಲಸಗಳನ್ನು ನಿರ್ವಹಿಸುವುದಕ್ಕೂ ಮೊಬೈಲ್ ನೆಟ್ವರ್ಕ್ ಅನಿವಾರ್ಯವಾಗಿದೆ. ಆದರೆ ಅಂಡಿಂಜೆ ಗ್ರಾಮದ ಜನರಿಗೆ ಮಾತ್ರ ಈ ಮೂಲಭೂತ ಸೌಲಭ್ಯವೇ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಹಲವು ಬಾರಿ ಏರ್ಟೆಲ್ ಸಂಸ್ಥೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಯುವ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಂತರ ತೊಂದರೆ ಎದುರಾಗುತ್ತಿದ್ದು, ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳು ಮೂಡಿವೆ.
ಗ್ರಾಮೀಣ ಪ್ರದೇಶಗಳಿಗೂ ಉತ್ತಮ ದೂರಸಂಪರ್ಕ ಸೌಲಭ್ಯ ಒದಗಿಸುವುದು ಇಂದಿನ ಅಗತ್ಯವಾಗಿದೆ. ಡಿಜಿಟಲ್ ಸೇವೆಗಳ ಬಳಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅಂಡಿಂಜೆ ಗ್ರಾಮದ ಜನರು ನೆಟ್ವರ್ಕ್ಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸವೇ ಸರಿ.
ಅದರಲ್ಲೂ ವಿದ್ಯುತ್ ಕಡಿತಗೊಂಡ ಸಂದರ್ಭದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ನೆಟ್ವರ್ಕ್ ವ್ಯವಸ್ಥೆಗೆ ಜನರೇಟರ್ ಸೌಲಭ್ಯವಿದ್ದರೂ, ಅದರ ಸರಿಯಾದ ನಿರ್ವಹಣೆ ನಡೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪಿಸಿದ್ದಾರೆ.
ಈಗಲಾದರೂ ಏರ್ಟೆಲ್ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ಅಂಡಿಂಜೆ ಗ್ರಾಮದ ನೆಟ್ವರ್ಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳ ಪರಿಶೀಲನೆ ನಡೆಸಿ, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ಸೂರ್ಯ ಕುಲಾಲ್ ವೇಣೂರು






