

ಮಣಿಪಾಲದ ವಿದ್ಯಾರತ್ನ ನಗರದ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಮಾರಕಾಸ್ತ್ರಗಳನ್ನು ಹೊಂದಿದ್ದ 26 ವರ್ಷದ ಯುವಕನೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ತನಿಖೆ) ಶಂಭುಲಿಂಗಯ್ಯ ಎಂ.ಇ. ಅವರಿಗೆ ವಿದ್ಯಾರತ್ನ ನಗರದಲ್ಲಿ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಅಕ್ಟೋಬರ್ 24 ರಂದು ಮಾಹಿತಿ ದೊರೆತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಉಡುಪಿಯ ಕಿನ್ನಿಮುಲ್ಕಿ ನಿವಾಸಿ ಮೊಹಮ್ಮದ್ ಪರ್ವೇಜ್ (26) ಎಂಬಾತನನ್ನು ವಶಕ್ಕೆ ಪಡೆದರು.
ಈ ಕಾರ್ಯಾಚರಣೆಯ ವೇಳೆ ಆತನಿಂದ ನೀಲಿ ಬಣ್ಣದ ಹಿಡಿಕೆಯುಳ್ಳ ಸುಮಾರು 20 ಇಂಚು ಉದ್ದದ ಮಚ್ಚು ಹಾಗೂ ಹಸಿರು ಬಣ್ಣದ ಹಿಡಿಕೆಯುಳ್ಳ ಸುಮಾರು 16 ಇಂಚು ಉದ್ದದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಉಡುಪಿ ನಗರ, ಶಿರ್ವ ಮತ್ತು ಸಿಇಎನ್ ಪೊಲೀಸ್ ಠಾಣೆಗಳಲ್ಲಿ ಹಾಗೂ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಈ ಹಿಂದೆ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ದಾವೂದ್, ಇಸಾಕ್ ಮತ್ತು ಗರುಡ ಗ್ಯಾಂಗ್‌ಗಳೊಂದಿಗೆ ತನಗೆ ವೈಯಕ್ತಿಕ ದ್ವೇಷವಿದ್ದು, ಅವರ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದಲೇ ಈ ಆಯುಧಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಮಾರಕಾಸ್ತ್ರಗಳನ್ನು ಜಪ್ತಿ ಮಾಡಿರುವ ಮಣಿಪಾಲ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ






