

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣವನ್ನು ಹಿಂದಿರುಗಿಸುವ ವಿಚಾರವಾಗಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿದ್ದು, ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ಎರಚಿ ತಲವಾರಿನಿಂದ ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ. ಘಟನೆಯಲ್ಲಿ ಇಂದ್ರಾಳಿ ಬುಡ್ನಾರು ನಿವಾಸಿ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ
ದಾಳಿಯ ಆರೋಪಿಯನ್ನು ಅಕ್ಕಸಾಲಿಗ ವೃತ್ತಿಯ ಸುರೇಶ್ ಆಚಾರ್ಯ (48) ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಆರೋಪಿ ಸುರೇಶ್ ಆಚಾರ್ಯ ಈ ಹಿಂದೆ ನವೀನ್ ಕುಮಾರ್ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ತಾನು ನೀಡಿದ್ದ ₹20,000 ಠೇವಣಿ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದ. ಆದರೆ, ಬಾಡಿಗೆ ಮನೆಯನ್ನು ಹಾನಿಗೊಳಿಸಿದ್ದ ಕಾರಣಕ್ಕೆ ಠೇವಣಿ ಹಣವನ್ನು ಮರಳಿಸಲು ನವೀನ್ ನಿರಾಕರಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಈ ಹಿಂದೆಯೂ ವಾಗ್ವಾದ ನಡೆದಿತ್ತು ಎಂದು ತಿಳಿದುಬಂದಿದೆ.

ಬುಧವಾರ ಮತ್ತೆ ನವೀನ್ ಅವರ ಅಂಗಡಿಗೆ ತೆರಳಿದ ಸುರೇಶ್ ಆಚಾರ್ಯ, ಠೇವಣಿ ಹಣದ ವಿಚಾರವಾಗಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಎನ್ನಲಾದ ಆರೋಪಿ, ತನ್ನ ಸ್ಕೂಟಿಯಲ್ಲಿ ತಂದಿದ್ದ ತಲವಾರು ಹಾಗೂ ಆಸಿಡ್ ಬಳಸಿ ನವೀನ್ ಕುಮಾರ್ ಅವರ ಮೇಲೆ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ದಾಳಿ ನಡೆಸಿದ ಬಳಿಕ ಆರೋಪಿ ಸ್ಕೂಟಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ






