

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮದರಸಾ ಶಿಕ್ಷಕನ ಕ್ರೌರ್ಯಕ್ಕೆ 10 ವರ್ಷದ ಪುಟ್ಟ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಸರಿಯಾಗಿ ಓದುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ರಾಕ್ಷಸ ಶಿಕ್ಷಕ ಬಾಲಕನ ಬಾಯಿಗೆ ಬಟ್ಟೆ ತುರುಕಿ, ಮನಬಂದಂತೆ ಥಳಿಸಿದ್ದಾನೆ. ಶಿಕ್ಷಕನ ಈ ಪೈಶಾಚಿಕ ಕೃತ್ಯದಿಂದಾಗಿ ಬಾಲಕನ ಎರಡು ಕಣ್ಣುಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಬಾಲಕ ತೀವ್ರ ಯಾತನೆ ಅನುಭವಿಸುವಂತಾಗಿದೆ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕನ ತಂದೆ ಅಬ್ದುಲ್ ನಹಿಮ್ ನೀಡಿದ ದೂರಿನ ಆಧಾರದ ಮೇಲೆ, ದಾರುಲ್ ಹುಪ್ಪಾಜ್ ಮದರಸಾದ ಶಿಕ್ಷಕ ಅಬ್ಬಾಸ್ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಕವಿತಾಳ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮದರಸಾದಲ್ಲಿ ಶಿಕ್ಷಣ ನೀಡಬೇಕಾದ ಶಿಕ್ಷಕನೇ ಮಗುವಿನ ಮೇಲೆ ಈ ರೀತಿ ದೌರ್ಜನ್ಯ ಎಸಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.






