

ಪುತ್ತೂರು: ಕಳೆದ 14 ವರ್ಷಗಳಿಂದ ಪ್ರತೀ ದೀಪಾವಳಿಯಂದು ಸ್ವಂತ ಉದ್ಯಮದ ಸಂಪಾದನೆಯ ಒಂದಷ್ಟು ಪಾಲನ್ನು ಬಡವರಿಗೆ ಹಂಚುವ ಕೆಲಸ ಮಾಡುತ್ತಿದ್ದೇನೆ. ಇದನ್ನು ಅಹಂಕಾರದಿಂದ ಮಾಡುತ್ತಿಲ್ಲ. ದೇವರು ಎಷ್ಟು ವರ್ಷ ಈ ಸೇವೆ ಮಾಡಲು ಶಕ್ತಿ ನೀಡುತ್ತಾನೋ ಅಷ್ಟು ವರ್ಷ ಮುಂದುವರಿಸುತ್ತೇನೆ. ಅಶೋಕ ಜನಮನ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸುವುದೇ ನನಗೆ ನೀವು ನೀಡುವ ದೊಡ್ಡ ಶಕ್ತಿ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನ.22ರಂದು ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ವಿವಿಧ ಸಮಿತಿಗಳ
ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವು ಬೆಳಿಗ್ಗೆ 9.30ರಿಂದ ಆರಂಭವಾಗಲಿದ್ದು, ಸಾರ್ವಜನಿಕರೆಲ್ಲರೂ ನಮ್ಮ ಅತಿಥಿಗಳಾಗಿರುತ್ತಾರೆ. ಬೆಳಿಗ್ಗೆ ಬರುವವರಿಗೆ ಉಪಾಹಾರ, ಮಧ್ಯಾಹ್ನ
ಆಗಮಿಸುವವರಿಗೆ ಊಟ ಹಾಗೂ ಸಂಜೆ ಬರುವವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಎಲ್ಲರಿಗೂ ಉಡುಗೊರೆ ವಿತರಿಸಲಾಗುವುದು. ನ.8ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಮುಂದೂಡಲಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಒಂದು ಲಕ್ಷ ಜನರ ನಿರೀಕ್ಷೆ :ಅಶೋಕ ಜನಮನ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಪ್ರತಿಯೊಬ್ಬರಿಗೂ ಊಟ, ಉಪಾಹಾರದ ಜೊತೆಗೆ ತಟ್ಟೆ, ಟವೆಲ್, ಬೆಡ್ಶೀಟ್ ಅಥವಾ ಸೀರೆ ಇವುಗಳಲ್ಲಿ ಯಾವುದಾದರೊಂದು ಉಡುಗೊರೆಯನ್ನು ವಿತರಿಸಲಾಗುವುದು. ಉತ್ತಮ ಗುಣಮಟ್ಟದ ಉಡುಗೊರೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಟ್ರಸ್ಟ್ ಸದಸ್ಯರು ಗ್ರಾಮಮಟ್ಟದಲ್ಲಿ ತೆರಳಿ ಸಾರ್ವಜನಿಕರಿಗೆ ಆಮಂತ್ರಣ ನೀಡುತ್ತಿದ್ದಾರೆ. ಆಮಂತ್ರಣ ತಲುಪದವರು ಇದನ್ನೇ ಆಹ್ವಾನವೆಂದು ಪರಿಗಣಿಸಿ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಶಾಸಕರು ತಿಳಿಸಿದರು.






