

ಕಾಪು: ಇಲ್ಲಿನ ಬೀಚ್‌ನಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ನೀರುಪಾಲಾಗಿದ್ದು, ನಾಪತ್ತೆಯಾದವರಿಗಾಗಿ ಸ್ಥಳೀಯರು, ಲೈಫ್ ಗಾರ್ಡ್ ಸಿಬ್ಬಂದಿ ಹಾಗೂ ಮುಳುಗು ತಜ್ಞರ ತಂಡದಿಂದ ಶೋಧ ಕಾರ್ಯ ಮುಂದುವರಿದಿದೆ.
ದಾವಣಗೆರೆಯಿಂದ ಜಿಯಾವುಲ್ಲ ಹಾಗೂ ಅವರ ಸಂಬಂಧಿಕರ ಒಟ್ಟು 10ರಿಂದ 12 ಮಂದಿ ಕುಟುಂಬ ಸದಸ್ಯರು ಪ್ರವಾಸದ ನಿಮಿತ್ತ ನ.22ರಂದು ಕಾಪು ಬೀಚ್‌ಗೆ ಆಗಮಿಸಿದ್ದರು. ಸಂಜೆ ಸುಮಾರು 4.30ರ ವೇಳೆಗೆ ಕುಟುಂಬದ ಮಕ್ಕಳು ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಮೊಹಮ್ಮದ್ ಇಸಾಕ್, ಸಮೀರ್ ಭಾಷಾ (20) ಹಾಗೂ ಮಲ್ಲಿಕ್ ರಿಯಾನ್ (15) ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ.
ತಕ್ಷಣ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಹಮ್ಮದ್ ಇಸಾಕ್ ಅವರನ್ನು ರಕ್ಷಿಸಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಸಮೀರ್ ಭಾಷಾ ಹಾಗೂ ಮಲ್ಲಿಕ್ ರಿಯಾನ್ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಸ್ಥಳೀಯರು, ಲೈಫ್ ಗಾರ್ಡ್ ಸಿಬ್ಬಂದಿ ಹಾಗೂ ಮುಳುಗು ತಜ್ಞರ ತಂಡದಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.






