

ಪುತ್ತೂರು: ಪುತ್ತೂರಿನ ಮೂರು ವೆಬ್ ಮಾಧ್ಯಮಗಳಾದ ಕಹಳೆ ನ್ಯೂಸ್, ಝೂಮ್ ಇನ್ ಟಿವಿ ಮತ್ತು ಹೊಸಕನ್ನಡ ವಿರುದ್ಧ ಸುಳ್ಯ ಪೊಲೀಸರು ದಾಖಲಿಸಿದ್ದ ಸ್ವಯಂಪ್ರೇರಿತ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 23ರಂದು ರದ್ದುಗೊಳಿಸಿದೆ. ಇದೇ ವೇಳೆ ಪೊಲೀಸರ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಶ್ರೀಶಾನಂದ ಅವರು, ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡದಂತೆ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ಮೂರು ವೆಬ್ ಮಾಧ್ಯಮಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ
2023ರ ಆಗಸ್ಟ್ 12ರಂದು ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದ ಎಂಎಸ್ಐಎಲ್ ಮದ್ಯದಂಗಡಿ ಸಮೀಪ ಕಾರು ಮತ್ತು ಸ್ಕೂಟರ್ಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಹಲ್ಲೆ ನಡೆಸಿ, ಧರ್ಮನಿಂದನೆ ಮಾಡಲಾಗಿದೆ ಎಂದು ಕೇರಳದ ಮಲಪ್ಪುರಂ ಜಿಲ್ಲೆಯ ಮೊಹಮ್ಮದ್ ಜಲೀಲ್ ಎಂಬವರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ವೇಳೆ ಸುಳ್ಯ ತಾಲೂಕಿನ ಜಾಲ್ಸೂರಿನ ಪುನೀತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಠಾಣೆಯ ಲಾಕ್ಅಪ್ನಲ್ಲಿ ಇರಿಸಿದ್ದರು.

ಈ ನಡುವೆ, 2023ರ ಆಗಸ್ಟ್ 13ರಂದು ಅರುಣ್ ಕುಮಾರ್ ಪುತ್ತಿಲ ಅವರು ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಬಂಧಿತ ಯುವಕರು ಬಿಡುಗಡೆಯಾಗಿದ್ದಾರೆ ಎಂಬರ್ಥದಲ್ಲಿ ಕಹಳೆ ನ್ಯೂಸ್, ಝೂಮ್ ಇನ್ ಟಿವಿ ಮತ್ತು ಹೊಸಕನ್ನಡ ವೆಬ್ಸೈಟ್ಗಳಲ್ಲಿ ವರದಿಗಳು ಪ್ರಕಟವಾಗಿದ್ದವು.
ಈ ವರದಿಗಳು ಪೊಲೀಸರ ಬಗ್ಗೆ ಜನರಲ್ಲಿ ತಪ್ಪು ಸಂದೇಶ ಮೂಡಿಸುವ ಹಾಗೂ ಧರ್ಮಗಳ ನಡುವೆ ಕೋಮು ಸಾಮರಸ್ಯ ಕೆಡಿಸುವ ಉದ್ದೇಶದಿಂದ ಪ್ರಕಟಿಸಲಾಗಿದೆ ಎಂದು ಆರೋಪಿಸಿ, ಬೆಳ್ಳಾರೆ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್ಪೆಕ್ಟರ್ ಈರಯ್ಯ ಡಿ.ಎನ್. ಅವರು ದೂರು ನೀಡಿದ್ದರು. ಇದರ ಆಧಾರದಲ್ಲಿ ಮೂರು ವೆಬ್ ಮಾಧ್ಯಮಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು.
ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ
ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮೂರು ವೆಬ್ ಮಾಧ್ಯಮಗಳ ಪ್ರತಿನಿಧಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ನ್ಯಾಯವಾದಿಗಳಾದ ಡಾ. ಅರುಣ್ಶ್ಯಾಮ್ ಪುತ್ತೂರು ಮತ್ತು ಸುಯೋಗ್ ಹೇರಳೆ ಅವರು ಮಾಧ್ಯಮಗಳ ಪರವಾಗಿ ವಾದ ಮಂಡಿಸಿದ್ದರು.
ಆರಂಭದಲ್ಲಿ ಪ್ರಕರಣಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್, ಇದೀಗ ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಆದೇಶಿಸಿದೆ.
ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಬೇಡ: ನ್ಯಾಯಮೂರ್ತಿ ಎಚ್ಚರಿಕೆ
ಪ್ರಕರಣದ ವಿಚಾರಣೆ ವೇಳೆ ಹಾಜರಿದ್ದ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್ಐ ಈರಯ್ಯ ಡಿ.ಎನ್. ಅವರನ್ನು ನ್ಯಾಯಮೂರ್ತಿ ಶ್ರೀಶಾನಂದ ಅವರು ತೀವ್ರವಾಗಿ ತರಾಟೆಗೆತ್ತಿಕೊಂಡರು.
ಘಟನೆ ನಡೆದಿರುವುದು ಸತ್ಯ. ರಾಜಕೀಯ ನಾಯಕರು ಪೊಲೀಸ್ ಠಾಣೆಗೆ ಭೇಟಿ ನೀಡಿರುವುದೂ ಸತ್ಯ. ಆರೋಪಿಯನ್ನು ಲಾಕ್ಅಪ್ನಲ್ಲಿ ಇರಿಸಿರುವುದೂ ಸತ್ಯ. ಈ ಎಲ್ಲ ವಿಚಾರಗಳನ್ನು ಮಾಧ್ಯಮಗಳು ಛಾಯಾಚಿತ್ರಗಳ ಸಹಿತ ವರದಿ ಮಾಡಿವೆ. ಇದರಲ್ಲಿ ಕೋಮು ದ್ವೇಷ ಹರಡುವಂತಹ ಅಥವಾ ಮಾನಹಾನಿ ಮಾಡುವಂತಹ ಅಂಶಗಳೇನಿವೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಪೊಲೀಸ್ ಇಲಾಖೆ ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಪೊಲೀಸರ ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ನ್ಯಾಯಮೂರ್ತಿಗಳು, ತೊಂದರೆಗೊಳಗಾದ ಮಾಧ್ಯಮಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಐ ಈರಯ್ಯ ಅವರು ಬೇಷರತ್ ವಿಷಾದ ವ್ಯಕ್ತಪಡಿಸಿ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ನ್ಯಾಯಮೂರ್ತಿಗಳು ಮೂರು ವೆಬ್ ಮಾಧ್ಯಮಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದರು.
ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಜಯ
ಮೂರು ವೆಬ್ ಮಾಧ್ಯಮಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿರುವುದು ತಮ್ಮ ಕಾನೂನು ಹೋರಾಟಕ್ಕೆ ಸಂದ ಜಯ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ಪ್ರತಿಕ್ರಿಯಿಸಿದೆ.
ಯಾವುದೇ ತಪ್ಪು ಮಾಡದಿದ್ದರೂ ಮಾಧ್ಯಮಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದಾಗಲೇ ಯೂನಿಯನ್ ಇದರ ವಿರುದ್ಧ ಧ್ವನಿ ಎತ್ತಿತ್ತು. ಅಲ್ಲದೆ, ತೊಂದರೆಗೊಳಗಾದ ಮಾಧ್ಯಮಗಳ ಪರವಾಗಿ ಕಾನೂನು ಹೋರಾಟಕ್ಕೂ ಮುಂದಾಗಿತ್ತು.
ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಮತ್ತು ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಅವರು ಮಾಧ್ಯಮಗಳ ಪರವಾಗಿ ನಿಂತು ಹೋರಾಟ ನಡೆಸಿದ್ದರು. ಹೈಕೋರ್ಟ್ನಲ್ಲಿ ನ್ಯಾಯವಾದಿಗಳಾದ ಡಾ. ಅರುಣ್ಶ್ಯಾಮ್ ಪುತ್ತೂರು ಮತ್ತು ಸುಯೋಗ್ ಹೇರಳೆ ಅವರು ಸಮರ್ಥವಾಗಿ ವಾದ ಮಂಡಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಪ್ರಕಟಣೆ ತಿಳಿಸಿದೆ.






