November 27, 2026
WhatsApp Image 2026-11-27 at 3.35.19 PM

ಮಂಗಳೂರು : ಪದವು ಗ್ರಾಮದ ಪ್ರಧಾನ ದೈವವಾದ ಶಕ್ತಿನಗರ ಕೊಡಂಗೆ ಮುರದ ಶ್ರೀ ವೈದ್ಯನಾಥ ದೈವಸ್ಥಾನದ ನೂತನ ಕೊಡಿಮರ ಸಮರ್ಪಣೆಯ ಅಂಗವಾಗಿ ಸೋಮವಾರ ಧಾರ್ಮಿಕ ಮೆರವಣಿಗೆ ನಡೆಯಿತು.

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಬಡಡ್ಕದ ಧೋಣಿಮೂಲೆಯಿಂದ ನೂತನ ಕೊಡಿಮರವನ್ನು ಕೊಲ್ಚಾರ್, ಅಜ್ಜಾವರ ಹಾಗೂ ಜಾಲ್ಸೂರು ಮಾರ್ಗವಾಗಿ ಮಂಗಳೂರಿಗೆ ತರಲಾಯಿತು. ಶಕ್ತಿನಗರದ ಶ್ರೀ ಮುತ್ತಪ್ಪ ಗುಡಿಯ ಸನ್ನಿಧಿಯಲ್ಲಿ ನೂತನ ಕೊಡಿಮರದ ಸಮರ್ಪಣಾ ಮೆರವಣಿಗೆಗೆ ಶಾಸಕ ಡಿ. ವೇದವ್ಯಾಸ ಕಾಮತ್ ಚಾಲನೆ ನೀಡಿದರು.

ಸಂಜೆ ಶ್ರೀ ಮುತ್ತಪ್ಪ ಗುಡಿಯಿಂದ ಆರಂಭಗೊಂಡ ಮೆರವಣಿಗೆ ಶ್ರೀ ವೈದ್ಯನಾಥ ದೈವಸ್ಥಾನದವರೆಗೆ ಭವ್ಯವಾಗಿ ಸಾಗಿತು. ಮೆರವಣಿಗೆಯಲ್ಲಿ ಚೆಂಡೆ ವಾದನ ತಂಡಗಳು, ಹುಲಿವೇಷದ ಟ್ಯಾಬ್ಲೋ, ಮಕ್ಕಳ ಕುಣಿತ ಭಜನಾ ತಂಡಗಳು ಭಾಗವಹಿಸಿದವು. ಪರಿಸರದ ನಾನಾ ಮಹಿಳಾ ಮಂಡಳಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಊರಿನ ಹಾಗೂ ಪರವೂರಿನ ಅಪಾರ ಸಂಖ್ಯೆಯ ಭಕ್ತರು ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಭಾವದಿಂದ ಪಾಲ್ಗೊಂಡಿದ್ದರು.

ಶ್ರೀ ವೈದ್ಯನಾಥ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ಶ್ರೀ ವೈದ್ಯನಾಥ ಸೇವಾ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಸ್ತಿ ಶ್ರೀಪಾದ ಶೆಣೈ, ಟ್ರಸ್ಟಿಗಳಾದ ಸೀತಾರಾಮ ಶೆಟ್ಟಿ, ಗಣೇಶ್ ಕುಂಟಲ್ಪಾಡಿ, ಶಿವಾನಂದ ಕೆ.ಆರ್., ನವೀನ್ ರೈ ಬಾಂದೊಟ್ಟು ಗುತ್ತು, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್ ದತ್ತನಗರ, ಮನಪಾ ನಿಕಟಪೂರ್ವ ಸದಸ್ಯರಾದ ಶಕೀಲಾ ಕಾವ, ವನಿತಾ ಪ್ರಸಾದ್, ಕಿಶೋರ್ ಕೊಟ್ಟಾರಿ, ಸೇವಾ ಸಮಿತಿ ಅಧ್ಯಕ್ಷ ಡಾ. ಚಂದ್ರಶೇಖರ್, ಕಾರ್ಯದರ್ಶಿ ರವೀಂದ್ರ ರೈ, ಉದ್ಯಮಿ ಅಶ್ವಿತ್ ಕೊಟ್ಟಾರಿ, ದೈವಸ್ಥಾನದ ಅರ್ಚಕ ಸತೀಶ್ ಭಟ್ ಸೇರಿದಂತೆ ಶಕ್ತಿನಗರದ ನಾನಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೆರವಣಿಗೆ ದೈವಸ್ಥಾನ ತಲುಪಿದ ಬಳಿಕ ನೂತನ ಕೊಡಿಮರ ಸಮರ್ಪಣೆಯ ನಾನಾ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

About The Author

Leave a Reply