

ಕೊಳ್ನಾಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವಿಟ್ಲ ಹಾಗೂ ಕೊಳ್ನಾಡು ಗ್ರಾಮದ ಖಂಡಿಗ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ, ಪೋಷಣ್ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವು ಇಂದು ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ ಮಾತನಾಡಿ, ಅಂಗನವಾಡಿ ಕೇಂದ್ರಗಳು ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಭದ್ರ ಬುನಾದಿ ಹಾಕುವ ಮಹತ್ವದ ಕೇಂದ್ರಗಳಾಗಿವೆ. ಗರ್ಭಿಣಿಯರು, ಬಾಣಂತಿಯರು, ಹಾಲುಣಿಸುವ ತಾಯಂದಿರು, ಆರು ವರ್ಷದೊಳಗಿನ ಮಕ್ಕಳು ಹಾಗೂ ಕಿಶೋರಿಯರ ಪೌಷ್ಟಿಕತೆ ಮತ್ತು ಆರೋಗ್ಯದ ಕಾಳಜಿಯಲ್ಲಿ ಅಂಗನವಾಡಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಅಂಗನವಾಡಿಗಳ ಮೂಲಕ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ, ಪೌಷ್ಟಿಕತೆ ಕುರಿತ ಸಲಹೆ ಹಾಗೂ ಅಗತ್ಯ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಬೆಳವಣಿಗೆಯ ಮೇಲ್ವಿಚಾರಣೆ, ಲಸಿಕೆ ಕಾರ್ಯಕ್ರಮಗಳಿಗೆ ಸಂಪರ್ಕ ಕಲ್ಪಿಸುವುದು, ಆರೋಗ್ಯ ಮತ್ತು ನೈರ್ಮಲ್ಯದ ಅರಿವು ಮೂಡಿಸುವುದು ಸೇರಿದಂತೆ ಹಲವು ಜನಪರ ಸೇವೆಗಳು ದೊರೆಯುತ್ತದೆ.ಪ್ರಸ್ತುತ ಸುಮಾರು 30 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಮಕ್ಕಳ ತಾಯಂದಿರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಒಡನಾಟ ಮತ್ತು ಸಮನ್ವಯ ಹೊಂದಿರುವುದು ಮಕ್ಕಳ ಆರೈಕೆ, ಪೌಷ್ಟಿಕತೆ ಹಾಗೂ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಇಂತಹ ಜನಸ್ನೇಹಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಮನಾ,ಹಾಗೂ ಸಹಾಯಕಿಯ ಶ್ರಮ ಮತ್ತು ಕಾಳಜಿ ನಿಜಕ್ಕೂ ಅಭಿನಂದನೀಯ,” ಎಂದು ತಿಳಿಸಿದರು.

ಪೋಷಣ್ ಅಭಿಯಾನ ಮತ್ತು ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಸಮುದಾಯ ಆರೋಗ್ಯಾಧಿಕಾರಿ ಸತೀಶ್ ಅವರು ಪೌಷ್ಟಿಕ ಆಹಾರದ ಮಹತ್ವ, ಸಮತೋಲಿತ ಆಹಾರ ಪದ್ಧತಿ, ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಉಪಯುಕ್ತ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ಬಳಿಕ ಮಗುವಿನ ತಂದೆ ಅಬ್ದುಲ್ ಸ್ವಾದಿಕಲಿ ಹನೀಫಿ ಮಕ್ಕಳಿಗೆ ಶುಭ ಹಾರೈಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ರಪೀಝಾ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಟೋಟ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ಅಬ್ಬಾಸ್ ಖಂಡಿಗ, ಶರೀಫ್ ಖಂಡಿಗ, ಅಂಗನವಾಡಿ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ರಫೀಕ್ ಮಂಚಿಬೈಲ್, ಖಂಡಿಗ ಕಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶರೀಫ್ ಖಂಡಿಗ, ಉಪಾಧ್ಯಕ್ಷೆ ಮಿಸ್ರೀಯಾ, ಅತಿಥಿ ಶಿಕ್ಷಕಿಯರಾದ ಹಸೀನಾ, ಅಪ್ರೀನಾ, ರಹೀಂ ಖಂಡಿಗ, ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಶ್ರೀಮತಿ ಕುಲ್ಯಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಖಂಡಿಗ ಸೌಂಡ್ಸ್ ಮಾಲೀಕ ಸಿದ್ದೀಕ್ ಖಂಡಿಗ ಅವರು ಸೌಂಡ್ಸ್ ಮತ್ತು ಸಿಸ್ಟಂ ವ್ಯವಸ್ಥೆ, ಅಲ್ ಮದೀನಾ ಎಗ್ ಸೆಂಟರ್ ನ ಮಹಮ್ಮದ ಅಶ್ರಪ್ ಹಾಗೂ ಶರೀಫ್ ಖಂಡಿಗ ಅವರು ಸಿಹಿತಿಂಡಿ ವ್ಯವಸ್ಥೆ, ಬಾಲವಿಕಾಸ ಸಮಿತಿ ಅಧ್ಯಕ್ಷೆ ರಪೀಝಾ ಖಂಡಿಗ ಅವರು ಬಹುಮಾನಗಳನ್ನು ಪ್ರಾಯೋಜಿಸಿದರು.
ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳು,ಮಕ್ಕಳ ಪೋಷಕರು,ಊರಿನ ನಾಗರೀಕರು ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಸುಮನಾ ಟೀಚರ್ ಸ್ವಾಗತಿಸಿ, ವಂದಿಸಿದರು.






