ವಿಚ್ಛೇದನ ಬಳಿಕ ಮುಸ್ಲಿಂ ಮಹಿಳೆಯರಿಗೆ ಜೀವನಾಂಶಕ್ಕೆ ಅರ್ಹಳು – ಸುಪ್ರೀಂ ಕೋರ್ಟ್‌ ತೀರ್ಪಿಗೆ ಮುಸ್ಲಿಂ ಬೋರ್ಡ್‌ ಆಕ್ಷೇಪ

ನವದೆಹಲಿ: ವಿಚ್ಛೇದನ ಬಳಿಕ ಮುಸ್ಲಿಂ ಮಹಿಳೆಯರ ಜೀವನಾಂಶಕ್ಕೆ ಅರ್ಹಳು ಎಂಬ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಇಸ್ಲಾಮಿಕ್‌ ಕಾನೂನಿಗೆ ವಿರುದ್ಧವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಆಕ್ಷೇಪ ವ್ಯಕ್ತಪಡಿಸಿದೆ. ಇತ್ತೀಚಿಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಕುರಿತಂತೆ ಭಾನುವಾರ ನಡೆದ ಮಂಡಳಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶಕ್ಕೆ ಅರ್ಹರು ಎಂದು ನೀಡಿರುವ ತೀರ್ಪಿನ ವಿರುದ್ಧ ನಿರ್ಣಯ ಅಂಗೀಕರಿಸಲಾಯಿತು. ಸಭೆಯ ನಿರ್ಣಯಗಳ ಬಗ್ಗೆ ಪ್ರಕಟಣೆ ನೀಡಿರುವ ಮಂಡಳಿ, ”ಮುಸ್ಲಿಂ ಕಾನೂನು ಮಂಡಳಿ ಪ್ರವಾದಿ ಮುಹಮ್ಮದರ ನಿಯಮಗಳನ್ನು ಪಾಲಿಸಲಿದೆ. ಅಲ್ಲಾಹನ ದೃಷ್ಟಿಯಲ್ಲಿನಿಷೇಧಿತವಾಗಿರುವ ವಿಚ್ಛೇದನ ತೊಡೆದು ಹಾಕಲು ಮಂಡಳಿ ಕೆಲಸ ಮಾಡಲಿದೆ. ಪವಿತ್ರ ಕುರಾನ್‌ನಲ್ಲಿಉಲ್ಲೇಖಿಸಿದಂತೆ ಮದುವೆಗಳನ್ನು ಸಂರಕ್ಷಿಸಲು ಬೇಕಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು,” ಎಂದು ಹೇಳಿದೆ. ಎಐಎಂಪಿಎಲ್‌ಬಿ ಭಾನುವಾರ ತನ್ನ ಕಾರ್ಯಕಾರಿ ಸಮಿತಿಯ ಸಭೆ ನಡೆಸಿ ಮುಸ್ಲಿಂ ಮಹಿಳೆಯರಿಗೆ ಜೀವನಾಂಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ನೀಡಿದ ತೀರ್ಪು ಇಸ್ಲಾಮಿಕ್ ಕಾನೂನಿಗೆ (ಷರಿಯಾ) ವಿರುದ್ಧವಾಗಿದೆ ಎಂದು ನಿರ್ಣಯವನ್ನು ಅಂಗೀಕರಿಸಿದೆ. ”ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ವಿರುದ್ಧ ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಮಾರ್ಗದಲ್ಲಿಕಾನೂನು ಹೋರಾಟ ನಡೆಸಲಾಗುವುದು. ಇಸ್ಲಾಮಿಕ್ ಕಾನೂನು ರಕ್ಷಿಸಿಕೊಳ್ಳಲು ತೀರ್ಪು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಗುವುದು,” ಎಂದು ಮಂಡಳಿ ವಕ್ತಾರ ಎಸ್‌.ಕ್ಯೂ.ಆರ್‌. ಇಲ್ಯಾಸ್ ಹೇಳಿದ್ದಾರೆ. ಸಭೆಯ ನಂತರ ಎಐಎಂಪಿಎಲ್‌ಬಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಿಚ್ಛೇದನವು ಅತ್ಯಂತ ಅಸಹ್ಯಕರ ಎಂದು ಪವಿತ್ರ ಪ್ರವಾದಿ ಉಲ್ಲೇಖಿಸಿದ್ದಾರೆ. ಆದ್ದರಿಂದ ವಿವಾಹವನ್ನು ಮುಂದುವರಿಸುವುದು ಉತ್ತಮ. ಹೀಗಿದ್ದರೂ ವೈವಾಹಿಕ ಜೀವನ ನಿರ್ವಹಣೆ ಕಷ್ಟವಾಗಿದ್ದರೆ ವಿಚ್ಛೇದನವನ್ನು ಮನುಕುಲಕ್ಕೆ ಪರಿಹಾರವಾಗಿ ಸೂಚಿಸಲಾಗಿದೆ ಎಂದು ಕುರಾನ್‌ ಹೇಳಿದೆ ಎಂದು ತಿಳಿಸಿದೆ. ವಿಚ್ಛೇದನದಿಂದ ಯಶಸ್ವಿಯಾಗಿ ಹೊರಬಂದ ಮಹಿಳೆಯರಿಗೆ ಈ ತೀರ್ಪು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್‌ ಹೇಳಿದ್ದೇನು? ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್​ 125ರ ಅಡಿ ಮುಸ್ಲಿಂ ಮಹಿಳೆಯೂ ವಿಚ್ಚೇದನ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂ ನ್ಯಾ. ಬಿವಿ ನಾಗರತ್ನ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಹೇಳಿತ್ತು. ವಿಚ್ಛೇದಿತ ಮಹಿಳೆಯೂ ತನ್ನ ಪರಿತ್ಯಕ್ತ ಪತಿಯಿಂದ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಬಹುದು. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986ರ ನಿಯಮವು ಈ ಸೆಕ್ಷನ್‌ಗೆ ಅನ್ವಯವಾಗುವುದಿಲ್ಲ ಎಂದು ಹೇಳಿತ್ತು.

Leave a Reply