Visitors have accessed this post 217 times.

ಸ್ವ ಪಕ್ಷದವರ ವಿರುದ್ಧವೇ ಅಸಮಾಧಾನ ಹೊರ ಹಾಕಿದ ಲಿಂಬಾವಳಿ ….!

Visitors have accessed this post 217 times.

ಬೆಂಗಳೂರು: ಮೈಸೂರಿನ ಮುಡಾ ಹಗರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಒಂದೆಡೆ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಸ್ವಪಕ್ಷದ ವಿರುದ್ಧವೇ ಬಿಜೆಪಿ ಮಾಜಿ ಸಚಿವ ಅರವಿಂದ್ ಲಿಂಬಾವಳಿಯವರು ಅಸಮಾಧಾನ ಹೊರಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

  ಮಾಜಿ ಸಚಿವರೂ ಆದ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ, ರಾಜ್ಯ ಬಿಜೆಪಿ ನಾಯಕರ ನಡೆಯನ್ನು ಟೀಕಿಸಿದ್ದು, ವಿರೋಧ ಪಕ್ಷವಾಗಿ ದನಿಯಾಗುತ್ತಿಲ್ಲ ಎಂದು ಬೊಟ್ಟು ಮಾಡಿದ್ದಾರೆ.

   ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಲಿಂಬಾವಳಿಯವರು, ಐಟಿ-ಬಿಟಿ ರಾಜಧಾನಿ ಎನಿಸಿರುವ, ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿರುವ ಬೆಂಗಳೂರು ಸೇರಿದಂತೆ, ಅನೇಕ ಜಿಲ್ಲೆಗಳಲ್ಲಿ ಡೆಂಗ್ಯೂ ತಾಂಡವವಾಡುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ನೆರೆ ಹಾವಳಿಯಿಂದ ಲಕ್ಷಾಂತರ ಜನ ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಈ ಬಗ್ಗೆ ಬೆಳಕು ಚೆಲ್ಲಬೇಕು, ಜನರ ಸಂಕಷ್ಟಕ್ಕೆ ಕನ್ನಡಿಯಾಗಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಅನಿಸದೇ ಹೋದುದು ದುರ್ದೈವ. ಪ್ರವಾಹಕ್ಕೂ ಮೊದಲು ಈ ಹಿಂದಿನ ವರ್ಷದ ಬರ ಪರಿಹಾರವೂ ಅನೇಕ ರೈತರಿಗೆ ತಲುಪಿಲ್ಲ. ಆ ಬಗ್ಗೆ ಪ್ರತಿಪಕ್ಷದ ನಾಯಕರು ಮಾತಾಡಲೇ ಇಲ್ಲ.

  ಶಾಸಕರೂ ಆಗಿರುವ ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರ ಮಧ್ಯೆ ಸಾಮರಸ್ಯ, ಹೊಂದಾಣಿಕೆ ಮತ್ತು ತಾಳ-ಮೇಳ ಇಲ್ಲದೇ ಹೋದದ್ದು ವಿಷಾದನೀಯ. ಇದರ ಸಂಪೂರ್ಣ ಲಾಭವನ್ನು ಆಡಳಿತ ಪಕ್ಷ ಪಡೆಯಲು ಸಹಾಯಕವಾಯಿತು. ಸಿಕ್ಕ ಅವಕಾಶ ಮತ್ತು ಸಮಯವನ್ನು ಸದನದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳದೇ, ಇಡೀ ಅಧಿವೇಶನದಲ್ಲಿ ವೃಥಾ ಕಾಲಹರಣ ಮಾಡಿ, ಇನ್ನೂ ಒಂದು ದಿನ ಬಾಕಿ ಇರುವಾಗಲೇ ಸದನದ ಕಲಾಪಗಳನ್ನು ಮೊಟಕುಗೊಳಿಸುವಲ್ಲಿ ಆಡಳಿತ ಪಕ್ಷದವರೊಂದಿಗೆ ಕೈಜೋಡಿಸಿದ ನಮ್ಮ ಪಕ್ಷದ ನಾಯಕರ ನಡೆ ಪ್ರಶ್ನಾರ್ಹ.

   ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಗ್ಯಾರಂಟಿ ಯೋಜನೆ ಹಣಕ್ಕೆ ಎಸ್‌ಸಿ-ಎಸ್‌ಟಿಗೆ ಮೀಸಲಿಟ್ಟಿರುವ ಅನುದಾನ ದುರ್ಬಳಕೆ.ಹೀಗೆ ಯಾವ ವಿಷಯವನ್ನೂ ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಮ್ಮ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಈ ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ವಿಷಯ ಮಂಡಿಸಲು ಪ್ರತಿಪಕ್ಷದ ನಾಯಕರೂ ವಿಫಲರಾದರು. ಆಡಳಿತ ಪಕ್ಷದೊಂದಿಗೆ ಪ್ರತಿಪಕ್ಷ ಶಾಮೀಲಾಗಿದೆಯಾ ಎಂದು ಜನ ಮಾತಾಡಿಕೊಳ್ಳುವಂತಾಯಿತು. ಮೈಸೂರಿನಲ್ಲಿ ಮುಡಾ ವಿರುದ್ಧ ನಡೆಸಿದ ಹೋರಾಟ ಕಣ್ಣೊರೆಸುವ ತಂತ್ರದಂತೆ ಕಂಡಿತು.

   ಒಟ್ಟಾರೆ ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿವೇಶನದಲ್ಲಿ ನಾಯಕರ ನಡೆ ಗಮನಿಸಿದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಜನಪರ ಹೋರಾಟಗಳಲ್ಲಿ ಹೇಗೆ ತನ್ನನ್ನು ತೊಡಗಿಸಿಕೊಳ್ಳಬಹುದು ಎಂಬುದು ನಿಷ್ಠಾವಂತ, ದೇವದುರ್ಲಭ ಕಾರ್ಯಕರ್ತರಿಗೆ ಆತಂಕದ ವಿಷಯವಾಗಿದೆ. ಬೆರಳೆಣಿಕೆಯಷ್ಟು ಶಾಸಕರನ್ನು ಹೊಂದಿದ್ದ ದಿನಗಳಲ್ಲೂ ಕಲಾಪಗಳಲ್ಲಿ ಆರ್ಭಟಿಸುತ್ತಿದ್ದ, ಜನರ ಆಶೋತ್ತರಗಳಿಗೆ ದನಿಯಾಗುತ್ತಿದ್ದ ಬಿಜೆಪಿಯನ್ನು ನೋಡಿದ್ದ ನನಗೆ, ಇಂದಿನ ನಮ್ಮ ಪಕ್ಷದ ಈ ಪರಿಸ್ಥಿತಿ ನೋಡಿ ತೀವ್ರ ಬೇಸರ ಮತ್ತು ಆತಂಕವಾಗುತ್ತಿದೆ ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *