Visitors have accessed this post 586 times.

ಯಜಮಾನಿಯರಿಗೆ ಭರ್ಜರಿ ಗುಡ್‌ ನ್ಯೂಸ್‌ : 2 ತಿಂಗಳ ʻಗೃಹಲಕ್ಷ್ಮಿʼ ಹಣ ಒಟ್ಟಿಗೆ ಜಮಾ

Visitors have accessed this post 586 times.

ಯಜಮಾನಿಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಎರಡು ತಿಂಗಳ ಹಣ ಪಾವತಿಗೆ ಬಾಕಿ ಇದ್ದು, ಶೀಘ್ರ ಪಾವತಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್ ಅವರು ತಿಳಿಸಿದ್ದಾರೆ.

 

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಸರ್ಕಾರ ಗೃಹ ಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಗ್ಯಾರಂಟಿ ಯೋಜನೆಗಳಿಂದ ಬಿಪಿಎಲ್ ಕುಟುಂಬದವರು ಯಾವುದೇ ಕಾರಣಕ್ಕೂ ವಂಚಿತರಾಗಬಾರದು, ಅರ್ಹರೆಲ್ಲರಿಗೂ ಗ್ಯಾರಂಟಿ ಯೋಜನೆಗಳು ತಲುಪಬೇಕು. ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನ ಸಪ್ತಾಹವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಗ್ಯಾರಂಟಿ ಅನುಷ್ಠಾನ ಜಾಗೃತಿ ಸಪ್ತಾಹ ಸಂಬಂಧ ರಾಜ್ಯ ಅಧ್ಯಕ್ಷರ ಗಮನಕ್ಕೆ ತಂದು, ರಾಜ್ಯಾದ್ಯಂತ ಈ ಕಾರ್ಯಕ್ರಮ ಆಯೋಜಿಸಲು ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು ಎಂದು ಪುಷ್ಪಾ ಅಮರನಾಥ್ ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳು ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬರಿಗೂ ತಲುಪಬೇಕು. ಆ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ತಾ.ಪಂ.ಇಒಗಳು, ಪಿಡಿಒಗಳು ಗ್ರಾಮ ಆಡಳಿತ ಅಧಿಕಾರಿಗಳು, ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಮನೆ ಮನೆ ಸಮೀಕ್ಷೆ ಮಾಡಿ ಗ್ಯಾರಂಟಿ ಯೋಜನೆಯಿಂದ ಯಾರು ದೂರವಿದ್ದಾರೆ. ಗ್ಯಾರಂಟಿ ಯೋಜನೆ ಇದುವರೆಗೆ ಪಡೆಯದಿರಲು ಕಾರಣವೇನು, ಮತ್ತಿತರ ಬಗ್ಗೆ ಮಾಹಿತಿ ಪಡೆಯಬೇಕು. ಜೊತೆಗೆ ಅಗತ್ಯ ದಾಖಲೆಗಳು ಇಲ್ಲದಿರುವವರು ಸಹ ಇದ್ದು, ಅಂತಹ ಕುಟುಂಬಗಳಿಂದ ಮಾಹಿತಿ ತಿಳಿದು, ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಗ್ಯಾರಂಟಿ ಯೋಜನೆ ಪ್ರಗತಿ ಸಾಧಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷರು ನಿರ್ದೇಶನ ನೀಡಿದರು.

ನವೆಂಬರ ತಿಂಗಳ ಮೊದಲ ವಾರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು, ನಂತರ ಸಪ್ತಾಹ ಹಮ್ಮಿಕೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ಎಲ್ಲಾ ಹಂತದ ಇಲಾಖಾ ಅಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದರು.

‘ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಈ ಕಾರ್ಯಕ್ರಮಗಳನ್ನು ಪ್ರತಿ ಹಂತದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು ಎಂದು ಪುಷ್ಪಾ ಅಮರನಾಥ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.’

ಸಾರ್ವಜನಿಕರ ಸ್ಥಳಗಳು ಸೇರಿದಂತೆ ಕಚೇರಿಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಕವನ್ನು ಅಳವಡಿಸಬೇಕು. ಇದರಿಂದ ಗ್ಯಾರಂಟಿ ಯೋಜನೆ ಪಡೆಯಲು ಸಹಕಾರಿಯಾಗಲಿದೆ ಎಂದು ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರು ಅಭಿಪ್ರಾಯಪಟ್ಟರು.

‘ಇಡೀ ರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆಗಳ ಪದವನ್ನು ಬಳಸಿದ್ದು ಸಿದ್ದರಾಮಯ್ಯ ಸರ್ಕಾರದ್ದಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷದೊಳಗೆ ಜಾರಿ ಮಾಡಿದೆ. ವಾರ್ಷಿಕವಾಗಿ 56 ಸಾವಿರ ಕೋಟಿ ರೂ. ವನ್ನು ಗ್ಯಾರಂಟಿ ಯೋಜನೆಗೆ ವಿನಿಯೋಗ ಮಾಡಲಾಗುತ್ತಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ ಎಂಬುದನ್ನು ಯಾರೂ ಸಹ ಮರೆಯುವಂತಿಲ್ಲ ಎಂದು ಡಾ.ಪುಷ್ಪಾ ಅಮರನಾಥ್ ಅವರು ವಿವರಿಸಿದರು.’

‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪ ಆಗಬಾರದು. ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಪ್ರತಿಯೊಬ್ಬ ಫಲಾನುಭವಿಗೂ ಸರ್ಕಾರದ ಯೋಜನೆಗಳು ತಲುಪಬೇಕು. ಅಸಡ್ಡೆ, ನಿರ್ಲಕ್ಷ್ಯ ಮಾಡಿದರೆ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಪುಷ್ಪಾ ಅಮರನಾಥ್ ಅವರು ಎಚ್ಚರಿಸಿದರು.’

ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಎರಡು ತಿಂಗಳ ಹಣ ಪಾವತಿಗೆ ಬಾಕಿ ಇದ್ದು, ಶೀಘ್ರ ಪಾವತಿಯಾಗಲಿದೆ. ಸರ್ಕಾರಿ ಕಚೇರಿಗಳು ಸೇರಿದಂತೆ ಬಸ್ ನಿಲ್ದಾಣ, ಆಸ್ಪತ್ರೆ, ಮಾರುಕಟ್ಟೆ, ಹೀಗೆ ವಿವಿಧ ಜನದಟ್ಟಣೆ ಪ್ರದೇಶದಲ್ಲಿ ಒಂದು ವಾರದಲ್ಲಿ ಗ್ಯಾರಂಟಿ ಫಲಕಗಳನ್ನು ಅಳವಡಿಸಬೇಕು. ಫಲಕದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಭಾವಚಿತ್ರ ಇರಬೇಕು. ಜನರಿಗೆ ಸರ್ಕಾರದ ಕಾರ್ಯಕ್ರಮವನ್ನು ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪುಷ್ಪಾ ಅಮರನಾಥ್ ಅವರು ತಾಕೀತು ಮಾಡಿದರು. ಬಿಪಿಎಲ್ ಕುಟುಂಬದ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆ ತಲುಪಬೇಕು ಎಂದರು. ಅಂತ್ಯೋದಯ ಅನ್ನಯೋಜನೆ ಅರ್ಹರಿಗೆ ತಲುಪಬೇಕು. ಅನ್ನಭಾಗ್ಯ ಯೋಜನೆಯು ಅರ್ಹರೆಲ್ಲರಿಗೂ ತಲುಪಬೇಕು ಎಂದರು.

Leave a Reply

Your email address will not be published. Required fields are marked *