ಮಂಗಳೂರು: ಕ್ಯಾಮರಾ ಖರೀದಿಸುವುದಾಗಿ ಹೇಳಿ ವಂಚನೆ..! ಎಟಿಎಂನಿಂದ ಹಣ ತರುವುದಾಗಿ ಹೇಳಿ ಮಹಿಳೆ ಮತ್ತು ಆಕೆಯ ಗಂಡ ಪರಾರಿ

ಮಂಗಳೂರು: ಕ್ಯಾಮರಾ ಮಾರಾಟ ಮಾಡುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದ ಯುವಕನಿಗೆ ಕ್ಯಾಮರಾ ಖರೀದಿಸುವುದಾಗಿ ಹೇಳಿ ಮಹಿಳೆ, ಆಕೆಯ ಗಂಡ ಮತ್ತು ಮಗ ಮೋಸ ಮಾಡಿ ಕ್ಯಾಮರಾ ಸಹಿತ ಪರಾರಿಯಾಗಿರುವ ಕುರಿತು ವರದಿಯಾಗಿದೆ.

ಪುತ್ತೂರಿನ ಯುವಕನೋರ್ವ ತನ್ನ ಕೆನಾನ್‌ ರೆಬಲ್‌ ಎಸ್‌ಎಲ್‌-2 ಕ್ಯಾಮರಾವನ್ನು ಮಾರಾಟ ಮಾಡುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದು, ಜಾಹೀರಾತು ನೋಡಿದ ಮಹಿಳೆಯೊಬ್ಬರು ತಾನು ಖರೀದಿಸುವುದಾಗಿ ಕರೆ ಮಾಡಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಸೆ.28ರಂದು ಮಂಗಳೂರಿನ ಯುನಿಟಿ ಆಸ್ಪತ್ರೆ ಬಳಿಗೆ ಬರುವಂತೆ ಮಹಿಳೆ ಆತನಿಗೆ ತಿಳಿಸಿದ್ದಾರೆ. ಯುವಕ ಮಧ್ಯಾಹ್ನ 2.30ರ ವೇಳೆಗೆ ಆಸ್ಪತ್ರೆ ಬಳಿಗೆ ಬಂದು ಆಕೆಗೆ ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆಗ ಬೈಕ್‌ನಲ್ಲಿ ಆಕೆಯ ಗಂಡ ಮುನೀರ್‌ ಮತ್ತು ಮಗ ಬಂದಿದ್ದು, ಯುವಕನನ್ನು ಮಹಿಳೆ ಇದ್ದಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಆಕೆಗೆ ಕ್ಯಾಮರಾ ತೋರಿಸಿದಾಗ ತನಗೆ ಇಷ್ಟವಾಗಿದೆ ಎಂದು ತಿಳಿಸಿ ಕ್ಯಾಮರಾ ಪಡೆದುಕೊಂಡು, ಎಟಿಎಂನಿಂದ ಹಣ ಡ್ರಾ ಮಾಡಿ ಕೊಡುವುದಾಗಿ ತಿಳಿಸಿ ಮುಂದೆ ಹೋಗಿದ್ದಾಳೆ. ಬಳಿಕ ಎಲ್ಲರೂ ಸೇರಿ ಹಣ ಕೊಡದೆ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕ್ಯಾಮರಾ ಪಡೆದುಕೊಂಡ ಮಹಿಳೆಗೆ ಕರೆ ಮಾಡಿದಾಗ ಆಕೆಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂದು ಯುವಕ ಕದ್ರಿ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave a Reply