ಸುರತ್ಕಲ್ : ಉದ್ಯಮಿ, ಧಾರ್ಮಿಕ ಮುಂದಾಳು ಮುಮ್ತಾಝ್ ಅಲಿ ಅವರ ಸಾವಿಗೆ ಕಾರಣನಾದ ಆರೋಪಿ ಅಬ್ದುಲ್ ಸತ್ತಾರ್ ಗೆ ಊರಿನಿಂದ ಬಹಿಷ್ಕಾರ ಹಾಕಬೇಕೆಂದು ಒತ್ತಾಯ ಕೇಳಿಬಂದಿದೆ.
ಸುರತ್ಕಲ್ ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಜಮಾಅತ್ ಸದಸ್ಯರು ಮಂಗಳವಾರ ರಾತ್ರಿ ಮಸೀದಿ ಬಳಿ ಜಮಾಯಿಸಿ ಆಗ್ರಹಿಸಿದ್ದಾರೆ. ಇಲ್ಲಿನ ಸ್ಥಳೀಯ ಸಂಸ್ಥೆಗಳಾದ ಚಾಲೆಂಜ್ ಫ್ರೆಂಡ್ಸ್ ಸರ್ಕಲ್ (ರಿ) ಮತ್ತು ಸತ್ತಾರ್ ಅಧ್ಯಕ್ಷನಾಗಿದ್ದ ನ್ಯೂಫ್ರೆಂಡ್ಸ್ ಕ್ಲಬ್ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿತ್ತು. ಈ ಮನವಿಯಲ್ಲಿ ಸೋಮವಾರ ನಮ್ಮ ಜಮಾಅತ್ ನಲ್ಲಿ ದಫನ ಮಾಡಲ್ಪಟ್ಟ ಹಾಜಿ ಮುಮ್ತಾಝ್ ಅಲಿ ಅವರ ಸಾವಿಗೆ ಕಾರಣನಾದ ಸತ್ತಾರ್ ಗೆ ಊರಿನಿಂದ ಬಹಿಷ್ಕಾರ ಹಾಕಬೇಕು. ಆತನ ಮರಣಾ ನಂತರ ಯಾವುದೇ ಕಾರಣಕ್ಕೂ ನಮ್ಮ ಜಮಾಅತ್ ಗೆ ಒಳಪಡುವ ಯಾವುದೇ ದಫನ ಭೂಮಿಯಲ್ಲಿ ದಫನಕ್ಕೂ ಅವಕಾಶ ನೀಡಬಾರದು, ಆತನಿಗೆ ಜೊತೆ ನೀಡಿದ ಸಿರಾಜ್ ಮತ್ತು ಮುಸ್ತಫಾ ಅವರ ಮೇಲಿನ ಆರೋಪ ಸಾಬೀತಾದರೆ ಅವರಿಗೂ ಇದೇ ರೀತಿಯಾಗಿ ಕ್ರಮ ವಹಿಸಬೇಕೆಂದು ಆಗ್ರಹಿಸಿತ್ತು. ಜಮಾಅತ್ ಅವರ ಈ ಮೇಲಿನ ಬೇಡಿಕೆ ಈಡೇರಿಸುವಂತೆ ಮಂಗಳವಾರ ರಾತ್ರಿ ಕೃಷ್ಣಾಪುರದ ಕೇಂದ್ರ ಬದ್ರಿಯಾ ಜುಮಾ ಮಸೀದಿ ಬಳಿ ಜಮಾಯಿಸಿದ್ದರು. ಈ ವೇಳೆ ಆಡಳಿತ ಸಮಿತಿ ಚರ್ಚಿಸಿ ಮುಂದಿನ ಶುಕ್ರವಾರ ತುರ್ತು ಮಹಾ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತು. ಭರವಸೆಯ ಹಿನ್ನೆಲೆಯಲ್ಲಿ ಮಸೀದಿಯ ಬಳಿ ಜಮಾಯಿಸಿದ್ದ ಜನರು ತಮ್ಮ ಮನೆಗಳಿಗೆ ಹಿಂದಿರುಗಿದರು ಎಂದು ತಿಳಿದು ಬಂದಿದೆ.