ಮಂಗಳೂರು: ಬಾಲಕಿಯನ್ನು ಮದುವೆಯಾದ ವ್ಯಕ್ತಿ, ಆತನ ತಂದೆ- ತಾಯಿ ಮತ್ತು ಸಂತ್ರಸ್ತ ಬಾಲಕಿಯ ತಂದೆ ತಾಯಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ- 2 (ಪೊಕ್ಸೊ) ತಲಾ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ಬಾಲಕಿಯನ್ನು ವಿವಾಹವಾದ ಉಳ್ಳಾಲ ತಾಲ್ಲೂಕು ಮಂಜನಾಡಿ ಗ್ರಾಮದ ಮೋಟೆಪದವು ನಿವಾಸಿ ಮಹಮ್ಮದ್ ಇಮ್ತಿಯಾಜ್, ಆತನ ತಂದೆ ಕೆ.ಐ.ಮೊಹಮ್ಮದ್, ತಾಯಿ ಮೈಮುನಾ, ಸಂತ್ರಸ್ತ ಬಾಲಕಿಯ ತಂದೆ ಬಂಟ್ವಾಳ ತಾಲ್ಲೂಕು ಫರಂಗಿಪೇಟೆ ರಾಮಲ್ಕಟ್ಟೆಯ ಅಬ್ದುಲ್ ಖಾದರ್ ಹಾಗೂ ಬಾಲಕಿಯ ತಾಯಿ ರಮ್ಲತ್ ಶಿಕ್ಷೆಗೆ ಒಳಗಾದವರು.
ಮಹಮ್ಮದ್ ಇಮ್ತಿಯಾಜ್ 2023ರ ಮೇ 31ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾಗಿದ್ದ. ಆತನ ತಂದೆ, ತಾಯಿ ಹಾಗೂ ಸಂತ್ರಸ್ತ ಬಾಲಕಿಯ ತಂದೆ- ತಾಯಿ ಸೇರಿ ಈ ಮದುವೆ ಮಾಡಿಸಿದ್ದರು. 2023ರ ಜೂನ್ 1ರಂದು ಉಳ್ಳಾಲ ತಾಲ್ಲೂಕು ಕೈರಂಗಳ ಗ್ರಾಮದ ನಂದರಪದವಿನಲ್ಲಿರುವ ಎಸ್.ಕೆ ಮಲ್ಟಿಪರ್ಪಸ್ ಹಾಲ್ನಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಅಪ್ತಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ನೀಡಿದ ದೂರಿನ ಆಧಾರದಲ್ಲಿ ನಗರದ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಠಾಣೆಯ ಇನ್ಸ್ಪೆಕ್ಟರ್ ರಾಜೇಂದ್ರ ಬಿ. ಅವರು ಐವರು ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಕಾಯ್ದೆಯಿಂದ ಮಕ್ಕಳ ರಕ್ಷಣೆ (ಫೋಕ್ಸೊ) ಕಾಯ್ದೆಯ ಸೆಕ್ಷನ್ 6 () ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 9 (ವಯಸ್ಕ ಪುರುಷ ಅಪ್ತಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾಗುವುದು), ಸೆಕ್ಷನ್ 10 (ವಯಸ್ಕ ಪುರುಷನಿಗೆ ಅಪ್ತಾಪ್ತ ವಯಸ್ಸಿನ ಬಾಲಕಿಯನ್ನು ಮದುವೆ ಮಾಡಿಕೊಡುವುದು) ಹಾಗೂ ಸೆಕ್ಷನ್ 11ರ (ಬಾಲಕಿಯ ಪೋಷಕರು ವಿವಾಹಕ್ಕೆ ಸಮ್ಮತಿಸುವುದು ಹಾಗೂ ವಿಧಿಗಳನ್ನು ನಿರ್ವಹಿಸುವುದು) ಅಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಬಾಲಕಿಯನ್ನು ಮದುವೆ ಮಾಡಿಕೊಟ್ಟಿದ್ದಕ್ಕೆ ಆಕೆಯ ತಂದೆ ತಾಯಿಗೆ ಬಾಲ್ಯ ವಿವಾಹ ಕಾಯ್ದೆಯ ಸೆಕ್ಷನ್ 10 ಮತ್ತು 11ರ ಅಡಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ- 2ರ (ಪೊಕ್ಸೊ) ನ್ಯಾಯಾಧೀಶರಾದ ಮಾನು ಕೆ.ಎಸ್ ಅವರು ತಲಾ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹ 5 ಸಾವಿರ (ಒಟ್ಟು ₹10 ಸಾವಿರ) ದಂಡ ವಿಧಿಸಿ ಆದೇಶ ಮಾಡಿದ್ದಾರೆ. ವರನ ತಂದೆ ತಾಯಿಗೆ ಬಾಲ್ಯ ವಿವಾಹ ಕಾಯ್ದೆಯ ಸೆಕ್ಷನ್ 10ರ ಅಡಿ ತಲಾ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹ 5 ಸಾವಿರ ದಂಡ ವಿಧಿಸಿದ್ದಾರೆ.
ಬಾಲಕಿಯನ್ನು ಮದುವೆಯಾದ ಮಹಮ್ಮದ್ ಇಮ್ತಿಯಾಜ್ಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 9ರಡಿಯಲ್ಲಿ ಒಂದು ವರ್ಷ ಕಠಿಣ ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಿ ಆದೇಶ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 10 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 22 ದಾಖಲೆಗಳನ್ನು ಗುರುತಿಸಲಾಗಿತ್ತು. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.