
ಗುರುಪುರ: ಮಣ್ಣು ಸಾಗಿಸುತ್ತಿದ್ದ ಲಾರಿಯೊಂದು ಬಸ್ ತಂಗುದಾಣ ಮತ್ತು ಶ್ರೀ ಶನೀಶ್ವರ ಪೂಜಾ ಸಮಿತಿಯ ಕಚೇರಿಗೆ ಡಿಕ್ಕಿ ಹೊಡೆದಿದ್ದು, ಬಸ್ ತಂಗುದಾಣ ಮತ್ತು ಕಚೇರಿ ಸಂಪೂರ್ಣ ಜಖಂಗೊಂಡ ಘಟನೆ ಗುರುಪುರ ಜಂಕ್ಷನ್ ನಲ್ಲಿ ನಡೆದಿದೆ.



ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು,ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನ ಕಡೆಗೆ ಹೋಗುತಿದ್ದ ಲಾರಿ ಕೇರಳದತ್ತ ಮಣ್ಣು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.ಘಟನೆಯಲ್ಲಿ ಬಸ್ ತಂಗುದಾಣ ಸಂಪೂರ್ಣ ನುಜ್ಜುಗುಜ್ಜಾಗಿದ್ದು , ಅದೃಷ್ಟವಶಾತ್ ದುರ್ಘಟನೆ ಸಂಭವಿಸಿದ ವೇಳೆ ಬಸ್ ತಂಗುದಾಣದಲ್ಲಿ ಜನರಿರಲಿಲ್ಲ. ಅಪಘಾತ ನಡೆದ ಬಳಿಕ ಚಾಲಕ ಲಾರಿಯನ್ನು ನಿಲ್ಲಿಸದೆ ಹೋಗಿದ್ದು,ಸ್ಥಳೀಯರು ಬೆನ್ನಟ್ಟಿ ಅಲೈಗುಡ್ಡೆಯಲ್ಲಿ ತಡೆದು ನಿಲ್ಲಿಸಿದ್ದಲ್ಲದೆ, ಚಾಲಕನಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.