
ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿನ ವರ್ತಕರಿಗೆ, ಉದ್ಯಮಗಳಿಗೆ ನಗರಸಭಾ ವ್ಯಾಪ್ತಿಯಲ್ಲಿ ಉದ್ದಿಮೆದಾರರು ತಮ್ಮ ಉದ್ಯಮದ ಜೊತೆಗೆ ತಂಬಾಕು ಮತ್ತು ಅದರ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಲ್ಲಿ, ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆ ಪರವಾನಿಗೆ ಜೊತೆಗೆ ತಂಬಾಕು ಮಾರಾಟದ ಬಗ್ಗೆ ಪ್ರತ್ಯೇಕ ಪರವಾನಿಗೆ ಪಡೆಯುವಂತೆ ಸೂಚಿಸಲಾಗಿದೆ. ಎಲ್ಲಾ ವರ್ತಕರು ತಮ್ಮ ಉದ್ದಿಮೆ ಪರವಾನಿಗೆಯನ್ನು ಮುಂದಿನ ಸಾಲಿಗೆ ನವೀಕರಿಸುವ ಸಂದರ್ಭ ತಂಬಾಕು ಮಾರಾಟ ಮಾಡುತ್ತಿರುವ ಬಗ್ಗೆ ನಗರಸಭಾ ಕಚೇರಿಗೆ ಮಾಹಿತಿ ನೀಡಿ ಪ್ರತ್ಯೇಕ ಪರವಾನಿಗೆ ಪಡೆಯಬೇಕು. ತಪ್ಪಿದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಉದ್ದಿಮೆಯನ್ನು ದಂಡ ಸಹಿತ ಸ್ಥಗಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು, ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬ ರಾಜು ಮತ್ತು ವಿತರಣೆ ವಿನಿಮಯ) ಅಧಿನಿಯಮ 2003ರಲ್ಲಿ ಉಲ್ಲೇಖಿಸಿರುವ ಸಾಮಾನ್ಯ ಅಂಶಗಳಂತೆ, ಅಧಿನಿಯಮದ ಕಲಂ (4) ರಂತೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ವ್ಯಕ್ತಿಯು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಬಾರದು. ಇದನ್ನು ಉಲ್ಲಂಘಿಸುವ ವ್ಯಕ್ತಿಗೆ 100 ರೂ. ದಂಡ ವಿಧಿಸಲಾಗುವುದು. ಕಲಂ ಸಂಖ್ಯೆ(6)ರಂತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರೇ ವ್ಯಕ್ತಿಗೆ ಮತ್ತು ಯಾವುದೇ ಶಿಕ್ಷಣ ಸಂಸ್ಥೆಯ 100 ಅಡಿ ಅಂತರದೊಳಗಿನ ಪ್ರದೇಶದಲ್ಲಿ ಯಾವುದೇ ಪ್ರದೇಶದಲ್ಲಿ ಯಾವುದೇ ಸಿಗರೇಟು ಅಥವಾ ಅದರ ಉತ್ಪನ್ನಗಳ ಮಾರಾಟವನ್ನು ದಾಸ್ತಾನು ಇಡಬಾರದು. ಇದರ ಉಲ್ಲಂಘನೆಯಾದಲ್ಲಿ 200 ರೂ. ದಂಡ ವಿಧಿಸಲಾಗುವುದು ಎಂದು ಪುತ್ತೂರು ನಗರಸಭೆ ಪೌರಾಯುಕ್ತರು ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.


