ಮಂಗಳೂರು: ನಗರದ ಬಂದರ್ ನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ʼಎಂಎಸ್‌ವಿ ಸಲಾಮತ್ʼ ಎಂಬ ಹೆಸರಿನ ಸರಕು ಸಾಗಣೆಯ ಹಡಗು ಕರ್ನಾಟಕ ಕರಾವಳಿಯ ಮಂಗಳೂರಿನ ನೈರುತ್ಯಕ್ಕೆ ಸುಮಾರು 60 ನಾಟಿಕಲ್ ಮೈಲು ದೂರದಲ್ಲಿ ಬುಧವಾರ ಮುಂಜಾನೆ ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 6 ಮಂದಿ ಸಿಬಂದಿಯನ್ನು ಕೋಸ್ಟ್‌ಗಾರ್ಡ್ ರಕ್ಷಿಸಿದೆ.ಮೇ 12ರಂದು ಈ ಹಡಗು ಮಂಗಳೂರು ಬಂದರ್ ನಿಂದ ಲಕ್ಷದ್ವೀಪಕ್ಕೆ ಸಿಮೆಂಟ್, ಕಟ್ಟಡ ಸಾಮಗ್ರಿಯನ್ನು ಒಳಗೊಂಡ ಸರಕುಗಳನ್ನು ಹೇರಿಕೊಂಡು ಸಾಗುತ್ತಿತ್ತು. ಮೇ 18ರಂದು ಕಡ್ಮತ್ ದ್ವೀಪವನ್ನು ತಲುಪುವ ನಿರೀಕ್ಷೆಯಿತ್ತು. ಆದರೆ ಮೇ 14ರ ಮುಂಜಾನೆ ಭಾರತೀಯ ಕಾಲಮಾನ ಸುಮಾರು 5:30ರ ವೇಳೆಗೆ ಬೃಹತ್ ಅಲೆಯೊಂದಕ್ಕೆ ಸಿಲುಕಿದ್ದು, ಇದರಿಂದ ಹಡಗು ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಮುಳುಗಡೆಗೆ ನಿಜವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.ಹಡಗಿನಲ್ಲಿದ್ದ ಸಿಬ್ಬಂದಿ ಮುಳುಗುತ್ತಿರುವ ಹಡಗಿನಿಂದ ರಕ್ಷಣೆಗಾಗಿ ಸಣ್ಣ ದೋಣಿಯನ್ನು ಆಶ್ರಯಿಸಿದ್ದರು. ಮತ್ತೊಂದು ಹಡಗಿನ ಸಿಬ್ಬಂದಿ ಇದನ್ನು ಗಮನಿಸಿ ಮಂಗಳೂರಿನ ಭಾರತೀಯ ಕರಾವಳಿ ಕಾವಲು ಪಡೆಗೆ ತಿಳಿಸಿದ್ದಾರೆ. ಗಸ್ತು ತಿರುಗುತ್ತಿದ್ದ ಐಸಿಜಿ ಹಡಗು ವಿಕ್ರಮ್ ಡಿಂಗಿ ದೋಣಿಯಿಂದ ಎಲ್ಲ ಸಿಬ್ಬಂದಿಯನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ, ಗುರುವಾರ ನವ ಮಂಗಳೂರು ಬಂದರಿಗೆ ಕರೆ ತಂದಿದ್ದಾರೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Like this:
Like Loading...
Related