Visitors have accessed this post 380 times.
ಮಲ್ಪೆ ಸೈಯದ್ ಅಬೂಬಕ್ಕರ್ ಸಿದ್ದಿಕ್ ಜಾಮಿಯಾ ಮಸೀದಿಯ ಕಚೇರಿ ಒಳಗೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೆ.28ರಂದು ಮಧ್ಯರಾತ್ರಿ ವೇಳೆ ನಡೆದಿದೆ.
ಬಂಧಿತ ಆರೋಪಿಯನ್ನು ಬಿಹಾರ ರಾಜ್ಯದ ಬಿನೋದ್ ರಿಶಿ(40) ಎಂದು ಗುರುತಿಸಲಾಗಿದೆ.
ಆರೋಪಿ ಕಚೇರಿಯ ಎದುರಿನ ಕಬ್ಬಿಣದ ಶೆಟರ್‌ನ ಬೀಗವನ್ನು ಮುರಿದು ಒಳನುಗ್ಗಿದ್ದು, ಕಛೇರಿಯ ಗೋಡೆಯ ಮೇಲೆ ಇರಿಸಿದ್ದ ಸಿಸಿ ಕ್ಯಾಮರಾವನ್ನು ಒಡೆದು ಹಾಕಿದ್ದಾನೆ. ಬಳಿಕ ಒಳಗೆ ಹೋಗಿ ಕಚೇರಿಯ ಕಬ್ಬಿಣದ ಕಪಾಟಿನ ಬೀಗವನ್ನು ಒಡೆಯಲು ಯತ್ನಿಸುತ್ತಿದ್ದನು.
ಈ ವೇಳೆ ಸ್ಥಳೀಯರಿಗೆ ಶಬ್ದ ಕೇಳಿದ್ದು, ಕೂಡಲೇ ಮಸೀದಿಗೆ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದರು. ತಕ್ಷಣ ಆಗಮಿಸಿದ ಮಸೀದಿಯವರು ಕಚೇರಿ ಒಳಗೆ ಕಳ್ಳತನಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.