August 19, 2025
WhatsApp Image 2025-07-14 at 11.55.16 AM

ಉಳ್ಳಾಲ: ತೊಕ್ಕೊಟ್ಟಿನಲ್ಲಿ ಶನಿವಾರ ರಾತ್ರಿ ನಡೆದಿದ್ದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಶ್ಲೀಲ ಕೈ ಸನ್ನೆ ಮಾಡಿ, ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಅಸೈಗೋಳಿ ನಿವಾಸಿ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ಬಂಧಿತ ಆರೋಪಿಗಳು. ತೊಕ್ಕೊಟ್ಟುವಿನ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ನಡೆದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಯುವಕರ ತಂಡವೊಂದು ಶನಿವಾರ ರಾತ್ರಿ 11.50ರ ವೇಳೆಗೆ ತೊಕ್ಕೊಟ್ಟು ಒಳಪೇಟೆ ಬಳಿ ಮೆರವಣಿಗೆ ಮುಂದೆ ಹೋಗಲು ಅವಕಾಶ ನೀಡದೆ ಜೋರಾಗಿ ಬ್ಯಾಂಡ್ ಬಾರಿಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿತ್ತು ಎನ್ನಲಾಗಿದೆ. ಈ ವೇಳೆ ಉಳ್ಳಾಲ ಠಾಣೆಯ ಮಹಿಳಾ ಸಿಬ್ಬಂದಿ ಪೂರ್ಣಿಮಾ ಮತ್ತು ಲಕ್ಷ್ಮೀ ಎಂಬವರು ಯುವಕರಲ್ಲಿ ಮುಂದಕ್ಕೆ‌ ಹೋಗುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಆರೋಪಿ ದೀಪಕ್ ಎಂಬಾತ ಮುಂದಕ್ಕೆ ಹೋಗದೆ ಮೆರವಣಿಗೆಯನ್ನು ತಡೆದು ನಿಲ್ಲಿಸಿ ಪೂರ್ಣಿಮಾರಿಗೆ ಕೈಬೆರಳುಗಳಲ್ಲಿ ಅಶ್ಲೀಲ ಸನ್ನೆ ಮಾಡಿ ನಿಂದಿಸಿದ್ದಾನೆಂದು ಆರೋಪಿಸಲಾಗಿದೆ. ಮತ್ತೋರ್ವ ಆರೋಪಿ ಕಿರಣ್ ಎಂಬಾತ ಪೂರ್ಣಿಮಾ ಅವರ ಸೊಂಟಕ್ಕೆ ಕೈ ಹಾಕಿ ತಳ್ಳಿದ್ದು, ಮೈಗೆ ಕೈ ಹಾಕಿ ಮಾನಭಂಗ ಮಾಡಿರುವುದಾಗಿ ಪೂರ್ಣಿಮಾ ಅವರು ಉಳ್ಳಾಲ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಆರೋಪಿಗಳಾದ ದೀಪಕ್ ಮತ್ತು ಕಿರಣ್ ಅವರನ್ನ ಬಂಧಿಸಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

About The Author

Leave a Reply