August 19, 2025
WhatsApp Image 2025-08-19 at 10.58.33 AM

ಬೆಂಗಳೂರು: ಹಠಾತ್ ಹೃದಯಾಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟೆಲಿ ಇಸಿಜಿ ವ್ಯವಸ್ಥೆ ಕಲ್ಪಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪರಿಷತ್ ಸದಸ್ಯ ಧನಂಜಯ್ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟೆಲಿ ಇಸಿಜಿ ವ್ಯವಸ್ಥೆಯಿಂದಾಗಿ ಜನರಿಗೆ ಸ್ಥಳೀಯ ಮಟ್ಟದಲ್ಲಿ ತಪಾಸಣೆಗೆ ಅನುಕೂಲವಾಗಲಿದೆ ಎಂದರು.

ಟೆಲಿ ಇ.ಸಿ.ಜಿ ಮೂಲಕ ತಜ್ಞವೈದ್ಯರಿಂದ ಅಗತ್ಯ ಮಾರ್ಗದರ್ಶನ ದೊರೆಯಲಿದೆ. ಹಠಾತ್ ಹೃದಯಘಾತಗಳನ್ನ ಪ್ರಿವೆಂಟ್ ಮಾಡಲು ಅವಕಾಶವಿದ್ದು,  ಆರಂಭದಲ್ಲೇ ಪತ್ತೆ ಹಚ್ಚುವತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಟೆಲಿ ಇಸಿಜಿ ಸಹಕಾರಿಯಾಗಲಿದೆ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ರಾಜ್ಯದ 86 ಸರ್ಕಾರಿ ಆಸ್ಪತ್ರೆಗಳಲ್ಲಿ ಹಠಾತ್ ಹೃದಯಾಘಾತಗಳನ್ನು ತಡೆಯಲು ಹಬ್ ಮತ್ರು ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಹೃದಯ ಜ್ಯೋತಿ ಯೋಜನೆ ಇಂದು ಸಾವಿರಾರು ಜನರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹೃದಯಜ್ಯೋತಿ ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ತಿಳಿಸಿದರು.

ಹಠಾತ್ ಹೃದಯಾಘಾತಗಳನ್ನು ತಡೆಯಲು ಸಹಕಾರಿಯಾಗಿರುವ ಟೆನೆಕ್ಟೆಪ್ಲೇಸ್ ಚುಚ್ಚುಮದ್ದು ಎಲ್ಲ ಆಸ್ಪತ್ರೆಗಳಲ್ಲಿ ಒದಗಿಸುವಂತೆ ಸದನದಲ್ಲಿ ಪರಿಷತ್ ಸದಸ್ಯ ಧನಂಜಯ್ ಸರ್ಜಿ ಮನವಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ 25 ಸಾವಿರ ಬೆಲೆ ಬಾಳುವ ಟೆನೆಕ್ಟೆಪ್ಲೇಸ್ ಚುಚ್ವುಮದ್ದನ್ನು ಉಚಿತವಾಗಿ ನೀಡಲಾಗುತ್ತಿದೆ. ಹೃದಯ ಜ್ಯೋತಿ ಯೋಜನೆ ಎಲ್ಲ ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ವಿಸ್ತರಣೆಯಾಗುವುದರಿಂದ, ಯೋಜನೆಯಡಿ ಟೆನೆಕ್ಟೆಪ್ಲೇಸ್ ಚುಚ್ಚುಮದ್ದು ಕೂಡ ಉಚಿತವಾಗಿ ದೊರೆಯಲಿದೆ ಎಂದು ಉತ್ತರಿಸಿದರು.

ಮಂಗಳೂರು ವೆನ್ ಲಾಕ್ ಆಸ್ಪತ್ರೆ, ಬೆಂಗಳೂರಿನ ಸಿ.ವಿ ರಾಮನ್ ನಗರ ಆಸ್ಪತ್ರೆ ಹಾಗೂ ಹೊಸಪೇಟೆ ಆಸ್ಪತ್ರೆಗಳಲ್ಲಿ ಹೃದಯ ರಕ್ತನಾಳಗಳ ಸಂಬಂಧಿತ ಚಿಕಿತ್ಸೆ ನೀಡುವ ಕ್ಯಾತ್ ಲ್ಯಾಬ್ ಗಳನನ್ನ ತೆರೆಯಲಾಗುವುದು. ಹೃದಯಘಾತಗಳನ್ನ ಪ್ರಿವೆಂಟ್ ಮಾಡಲು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಗೃಹ ಆರೋಗ್ಯ ಯೋಜನೆಯಡಿ 30 ವರ್ಷ ಮೇಲ್ಪಟ್ಟವರನ್ನು ರಕ್ತದೊತ್ತಡ ಹಾಗೂ ಡಯಾಬಿಟಿಸ್ ತಪಾಸಣೆ ನಡೆಸಿ ಉಚಿತವಾಗಿ ಔಷಧಿಗಳನ್ನು ನೀಡುವ ಯೋಜನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ.‌ ಹೃದಯಘಾತ, ಸ್ಟ್ರೋಕ್, ಕಿಡ್ನಿ ವೈಫಲ್ಯದಂತಹ ಕಾಯಿಲೆಗಳಿಗೆ ಮೂಲ ಕಾರಣ ರಕ್ತದೊತ್ತಡ ಹಾಗೂ ಡಯಾಬಿಟಿಸ್. ಇದಕ್ಕೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಒದಗಿಸಿದಾಗ ಹೃದಯಾಘಾತದಂತಹ ಅಪಾಯಗಳಿಂದ  ಜೀವಗಳನ್ನ ಪಾರುಮಾಡಬಹುದು. ಈ ನಿಟ್ಟಿನಲ್ಲಿ ರಕ್ತದೊತ್ತಡ, ಡಯಾಬಿಟಿಸ್ ಜೊತೆಗೆ 14 ಕಾಯಿಲೆಗಳ ತಪಾಸಣೆಯನ್ನು ಗೃಹ ಆರೋಗ್ಯ ಯೋಜನೆಯಡಿ ತೆಗೆದುಕೊಳ್ಳಲಾಗಿದ್ದು, ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

About The Author

Leave a Reply