ಪಾಟ್ನಾ : ಗಂಡು ಮಗು ಆಗ್ಲಿ ಅಂತ ಮಾಂತ್ರಿಕರೊಬ್ಬರ ಸಲಹೆಯ ಮೇರೆಗೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ವರ್ಷಗಳ ಕಾಲ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದೆ. ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ತಂದೆ ಅತ್ಯಾಚಾರ ಮಾಡಿರುವ ಘೋರ ಘಟನೆ ಇದಾಗಿದೆ. ಇನ್ನು, ಈ ಪ್ರಕರಣ ಹಳೆಯದಾಗಿದ್ದು, ಬಕ್ಸಾರ್ ಜಿಲ್ಲೆಯ ಸ್ಥಳೀಯ POCSO ನ್ಯಾಯಾಲಯವು ಆರೋಪಿ ತಂದೆ ಬಿನೋದ್ ಕುಮಾರ್ ಸಿಂಗ್ ಮತ್ತು ತಂತ್ರಿ ಅಜಯ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ, ಅತ್ಯಾಚಾರಕ್ಕೆ ಪ್ರೇರೇಪಿಸಿದ ಸಂತ್ರಸ್ತ ಹೆಣ್ಣುಮಕ್ಕಳ ತಾಯಿ ಹಾಗೂ ಚಿಕ್ಕಮ್ಮನಿಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಕಳೆದ ಒಂದು ದಶಕದಿಂದ ಅಪ್ರಾಪ್ತ ಸಹೋದರಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಬಳಿಕ ಸಂತ್ರಸ್ತ ಬಾಲಕಿಯರು ಕೊನೆಗೂ ಪೊಲೀಸರಿಗೆ ವಿಷಯ ತಿಳಿಸಿದ್ದು, ನಂತರ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು, ಈ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿದ ಸಾಮಾಜಿಕ ವಿಜ್ಞಾನಿ ಪ್ರೊಫೆಸರ್ ಸಚೀಂದ್ರ ನಾರಾಯಣ್, ಇಂತಹ ಘಟನೆ ಸಾಕಷ್ಟು ಆತಂಕಕಾರಿಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳದ ಹೊರತು ಧಾರ್ಮಿಕ ಸಾಮಾಜಿಕ ಮೌಲ್ಯಗಳನ್ನು ನಾಶಪಡಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.