ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ – ಸೆಕ್ಷನ್ 144 ಜಾರಿ

ಶಿವಮೊಗ್ಗದಲ್ಲಿ ಈದ್​ ಮಿಲಾದ್ ಪ್ರಯುಕ್ತ ನಡೆದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಗಿಗುಡ್ಡ ಪ್ರದೇಶದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಇಲ್ಲಿನ ರಾಗಿಗುಡ್ಡ-ಶಾಂತಿನಗರ ಪ್ರದೇಶದಲ್ಲಿ ಭಾನುವಾರ ಕಟೌಟ್ ವಿಚಾರದಲ್ಲಿ ಉಂಟಾದ ವಾಗ್ವಾದ ಹಿಂಸೆಗೆ ತಿರುಗಿದೆ. ಈ ವೇಳೆ ಹಿಂದೂ ಸಮುದಾಯದ 6ಕ್ಕೂ ಹೆಚ್ಚು ಮನೆಗಳು ಹಾಗೂ ವಾಹನಗಳ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಮನೆಗಳ ಕಿಟಕಿ, ವಸ್ತುಗಳು ಹಾಗೂ ಮಾರುತಿ ಒಮ್ನಿ ಸೇರಿದಂತೆ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಶಾಂತಿನಗರ 9ನೇ ಕ್ರಾಸ್ ನಲ್ಲಿ ಪೊಲೀಸರ ಮೇಲೂ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ರಾಗಿಗುಡ್ಡ ಪ್ರದೇಶದ ಎಲ್ಲ ವಾರ್ಡ್ ಗಳು ಹಾಗೂ ಶಾಂತಿನಗರ ಭಾಗದಲ್ಲಿ ಮುಂದಿನ ಆದೇಶದವರೆಗೂ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

Leave a Reply