ಮಂಗಳೂರು: ಬಸ್‌ನಲ್ಲಿ ಮಹಿಳೆಗೆ ಅವಾಚ್ಯವಾಗಿ ಬೈದು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಟಿ ಬಸ್ ನಿರ್ವಾಹಕ ಮತ್ತು ಚಾಲಕನನ್ನು ಬಂಧಿಸಿದ್ದಾರೆ. ಬಂದಿತ ಆರೋಪಿಗಳನ್ನು ಭರತ್ ಸಾಲ್ಯಾನ್ ಮತ್ತು ಶಿವ ಕುಮಾರ್ ಎಂದು ಗುರುತಿಸಲಾಗಿದೆ. ಮಂಗಳೂರು ನಗರದ ಹೊರವಲಯದ ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿ ಯಾಗಿರುವ ನಗರದ ವಕೀಲೆ ಮುಫೀದಾ ರಹ್ಮಾನ್ ಕಳೆದ ಸೋಮವಾರ ಮಧ್ಯಾಹ್ನ 2 ಗಂಟೆಗೆ ಪಿವಿಎಸ್ ಸರ್ಕಲ್ ಬಳಿ ಬೋಂದೆಲ್‌ನಿಂದ ಸ್ಟೇಟ್ ಬ್ಯಾಂಕ್ ಕಡೆಗೆ ತೆರಳುವ ರೂಟ್ ನಂಬ್ರ 19ರ ಆಶೆಲ್ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಹತ್ತುವಾಗ ಚಾಲಕ ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ್ದ ಮಹಿಳೆ ಬೀಳುವ ಸ್ಥಿತಿಯಲ್ಲಿದ್ದಾಗ ಪುಟ್ ಪಾತ್‌ನಲ್ಲಿದ್ದ ಕಂಡಕ್ಟರ್ ಆಕೆಯ ಕೈ ಹಿಡಿದು ಎಳೆದಿದ್ದ. ಅನಂತರ ನಿರಂತರ ಅವಾಚ್ಯವಾಗಿ ಬೈದು ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಶುಕ್ರವಾರ ಆರೋಪಿಗಳನ್ನು ಬಂಧಿಸಿ ಜೆಎಂಎಫ್‌ಸಿ 6ನೇ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಭಿಯೋಜನೆ ಪರ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ ಬಿ. ವಾದಿಸಿದ್ದರು.