ಪುತ್ತೂರು: ಅಬಕಾರಿ ಇಲಾಖೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತೀ ಶೀಘ್ರದಲ್ಲೇ ಕೆಲವೊಂದು ಬದಲಾವಣೆಗಳು ಇಲಾಖೆಯಲ್ಲಿ ಜಾರಿಗೆ ಬರಲಿದೆ ಎಂದು ರಾಜ್ಯ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸದ್ಯಕ್ಕೆ ಹೊಸ ವೈನ್ ಶಾಪ್ ಗಳಿಗೆ ಪರವಾನಗಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅದೇ ರೀತಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ ಎಂಬ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಿಗೆ ಅನುದಾನ ಬರುತ್ತಿಲ್ಲ, ಸ್ಥಳೀಯ ಶಾಸಕರಿಗೆ ಅನುದಾನ ದೊರೆಯುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ ಸಚಿವರೊಂದಿಗೆ ಸ್ಥಳದಲ್ಲಿದ್ದ ಶಾಸಕ ಅಶೋಕ್ ಕುಮಾರ್ ರೈ ಗರಂ ಆದರು. ಸ್ಥಳೀಯ ಶಾಸಕ ನಾನೇ, ನಾನು ಅನುದಾನ ಬರುತ್ತಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಜಿಲ್ಲೆಯ ಬೇರೆ ಪಕ್ಷದ ಶಾಸಕರು ಅನುದಾನ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಮಗೆ ಅನುದಾನ ಬರುತ್ತಿದೆ. ಕಾಮಗಾರಿಗಳೂ ನಡೆಯುತ್ತಿದೆ ಎಂದು ಹೇಳಿದರು. ಶಾಸಕರ ಮಾತಿಗೆ ಸಚಿವ ಆರ್.ಬಿ.ತಿಮ್ಮಾಪುರ ಅವರು ಕೂಡ ಹೌದೆಂದು ತಲೆಯಾಡಿಸಿದರು.