ಬಂಟ್ವಾಳ : ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಪ್ರಾಣ ಬಿಟ್ಟ ಯುವತಿ, ಮೃತದೇಹ ಮೇಲಕ್ಕೆತ್ತಿದ ಗೂಡಿನಬಳಿ ಜೀವರಕ್ಷಕ ತಂಡದ ಯುವಕರು

ಬಂಟ್ವಾಳ : ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ ಸಿ ರೋಡು ಸಮೀಪದ ಕೈಕುಂಜೆ ಎಂಬಲ್ಲಿ ಗುರುವಾರ ಮುಂಜಾನೆ ವೇಳೆ ಸಂಭವಿಸಿದೆ.

ಮೃತ ಯುವತಿಯನ್ನು ತುಮಕೂರು ಮೂಲದ ನಯನ (25) ಎಂದು ಪೊಲೀಸರು ಗುರುತಿಸಿದ್ದಾರೆ.

ಗುರುವಾರ ಮುಂಜಾನೆ ಸುಮಾರು 6.25 ರ ವೇಳೆಗೆ ಸಂಚರಿಸುತ್ತಿದ್ದ ರೈಲಿನಿಂದ ಯುವತಿ ನದಿ ನೀರಿಗೆ ಜಿಗಿದಿದ್ದಾಳೆ ಎನ್ನಲಾಗಿದೆ. ರೈಲಿನ ಇತರ ಪ್ರಯಾಣಿಕರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಘಟನೆಯನ್ನು ಖಚಿತ ಪಡಿಸಿಕೊಂಡಿದ್ದಾರೆ.

ತಕ್ಷಣ ನದಿಯಲ್ಲಿ ದೋಣಿ ಮೂಲಕ ಕಾರ್ಯಾಚರಣೆ ನಡೆಸಿದ ಗೂಡಿನಬಳಿ ನಿವಾಸಿ ಮುಹಮ್ಮದ್ ಮಮ್ಮು ನೇತೃತ್ವದ ಜೀವ ರಕ್ಷಕ ತಂಡದ ಯುವಕರಾದ ಇರ್ಶಾದ್ ಡ್ರೀಮ್ಸ್, ಮನ್ಸೂರ್ ಮೊದಲಾದವರು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಧಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರಿದಿದೆ.

Leave a Reply