ಉಳ್ಳಾಲ: ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದ ಪುತ್ತೂರು ಮೂಲದ ವಿದ್ಯಾರ್ಥಿನಿ ನಾಪತ್ತೆ..!

ಉಳ್ಳಾಲ: ಕೋಟೆಕಾರು ಬಳಿಯ ಮಾಡೂರಿನ ಪಿಜಿಯೊಂದರಲ್ಲಿದ್ದು ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದ ಪುತ್ತೂರು ಮೂಲದ ಬ್ರಾಹ್ಮಣ ವಿದ್ಯಾರ್ಥಿನಿ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಮುಸ್ಲಿಂ ಯುವಕನೊಂದಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದ ವಿದ್ಯಾರ್ಥಿನಿ ಪುತ್ತೂರು ಮೂಲದ ಚೈತ್ರಾ ಹೆಬ್ಬಾ‌ರ್(27) ಎಂದು ಗುರುತಿಸಲಾಗಿದೆ.

ಚೈತ್ರಾ ದೇರಳಕಟ್ಟೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಎಸ್ಸಿ ಮುಗಿಸಿ ಫುಡ್ ಸೆಕ್ಯುರಿಟಿ ವಿಷಯದಲ್ಲಿ ಪಿಎಚ್ ಡಿ ಅಧ್ಯಯನ ನಡೆಸುತ್ತಿದ್ದಳು. ಕೋಟೆಕಾರು ಮಾಡೂರಿನ ಅಹನಾ ಎಂಬ ಪಿಜಿಯಲ್ಲಿ ಸ್ನೇಹಿತೆಯರೊಂದಿಗೆ ಚೈತ್ರಾ ನೆಲೆಸಿದ್ದಳು. ಚೈತ್ರಾಳ ತಂದೆ ಮೃತರಾಗಿದ್ದು ಮಂಗಳೂರಿನ ಕದ್ರಿಯಲ್ಲಿ ನೆಲೆಸಿರುವ ದೊಡ್ಡಪ್ಪನ ಆಶ್ರಯದಲ್ಲಿದ್ದು ಎಂಎಸ್ಸಿ ಪೂರೈಸಿದ್ದಳು.

ಕಳೆದ ಫೆ.17 ರಂದು ಬೆಳಗ್ಗೆ 9 ಗಂಟೆಗೆ ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಚೈತ್ರಾ ಕದ್ರಿಯ ಮನೆಗೂ ತೆರಳದೆ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾಳೆ. ಚೈತ್ರಾ ನೆಲೆಸಿದ್ದ ಪಿಜಿಗೆ ಪುತ್ತೂರಿನ ಮುಸ್ಲಿಂ ಯುವಕನೋರ್ವ ಪದೇ ಪದೇ ಬರುತ್ತಿದ್ದು ಡ್ರಗ್ಸ್ ಸಪ್ಲೆ ಮಾಡುತ್ತಿದ್ದ ಬಗ್ಗೆ ಸ್ಥಳೀಯರು ಆರೋಪಿಸಿ ಹಿಂದು ಸಂಘಟನೆಗಳ ಗಮನಕ್ಕೆ ತಂದಿದ್ದರು.

ಈ ಬಗ್ಗೆ ವಿಷಯ ತಿಳಿದ ಬಜರಂಗದಳ ಮುಖಂಡ ಅರ್ಜುನ್ ಮಾಡೂರು ಅವರು ವಾರದ ಹಿಂದೆ ಚೈತ್ರಾಳ ದೊಡ್ಡಪ್ಪನಿಗೆ ಮಾಹಿತಿ ನೀಡಿದ್ದರು. ಫೆ.17 ರಂದು ಚೈತ್ರಾ ನಾಪತ್ತೆಯಾದ ವಿಚಾರ ತಿಳಿದ ದೊಡ್ಡಪ್ಪ ಮರುದಿನ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಅದಾಗಿ ಮೂರು ದಿನ ಕಳೆದರೂ ಚೈತ್ರಾ ಮರಳಿ ಬಂದಿಲ್ಲ ಎಲ್ಲಿ ಹೋಗಿದ್ದಾಳೆಂದು ಗೊತ್ತಾಗಿಲ್ಲ. ಬಜರಂಗದಳ ಪ್ರಮುಖರು ಪುತ್ತೂರಿನ ಮುಸ್ಲಿಂ ಯುವಕನೊಂದಿಗೆ ತೆರಳಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

Leave a Reply